Sunday, December 25, 2011





ನಿನ್ನ ಮುಖ
ನನ್ನ ಮುಖ ನೋಡಿ
ನಲಿದಿದ್ದೆ, ಕಾರಣದ ಅವತಾರದಲ್ಲಿ 
ಗಗನ ಕುಸುಮದಂತೆ ಕಂಡು
ನಕ್ಕು
ಸುಮ್ಮನಾದೆ
ನೀನು
ಅಷ್ಟೊತ್ತಿಗಾಗಲೇ ನಾನು
ಅರೆ ಬರೆ ಹುಚ್ಚ


ಕಾಲುವೆ ನೀರಲ್ಲಿ 
ಮೀನು ಹಿಡಿದಿದ್ದು,
ಬಿಲದ ಬಾಯಿಗೆ ಕೈ ಹಾಕಿ ಏಡಿ ಸರ ತಂದಿದ್ದು
ಮೊನ್ನೆ ಮೊನ್ನೆಯ ಹಾಗೆ ಕಣ್ಣಿಗೆ 
ಬಡಿದು ಹೋಗುತ್ತವೆ
ಅಸಂಖ್ಯ ಭೂತಗಳು
ಗದ್ದೆ ಹಸುರಿನ ಬದುಗಟ್ಟಿ
ಪೈರು ಬಿಗಿದು ಬೀಳಿಸಿ ಓಡಿದ್ದು
ಗೆಳೆಯರ
ನೆಲ್ಲಿನುರಿ ಮೈ ಮುಖ ಪರಚಿದ
ಹಾಗೆ
ಕಾಣಿಸಿದೆ ಸತ್ಯ
ತಲೆ ಕೆರೆದುಕೊಂಡಷ್ಟೂ
ಹೆಚ್ಚುವಂತೆ ಹೊಟ್ಟು.........




ಭೂಮಿ ಅಗೆದಿದ್ದರೆ
ನೀರಾದರೂ ಸಿಗುತ್ತಿತ್ತೇನೋ
ವ್ಯೋಮಕ್ಕೆ ನೆಗೆನೆಗೆದು 
ಮಿನುಗಿ ನಕ್ಷತ್ರವಾದೆ
ನೀನು ಸುಳ್ಳೋ 
ಸತ್ಯವೋ
ಭ್ರಮೆಗೆ ಬೀಳುವು ಮುನ್ನ
ಮತ್ತೆ ಮತ್ತೆ ಸಾಯುತ್ತೇನೆ
ನನ್ನ ಅಂತರಂಗ ಕರೆಯುವ ತನಕ
ಊಟಕ್ಕೆ




ಅಂತರಂಗ
ಕಿತ್ತು ಬಂದಂತೆ 
ಕೂಗುತ್ತದೆ
ಅಲ್ಲಿಹನು ನಿನ್ನ ಗುರು
ದೂರದಲ್ಲೆಲ್ಲೋ ಸುಡುಗಾಡು
ನಿನ್ನ ತಾವು
ಸಂಬಂಧಗಳ ಕಳಚಿಕೊಳ್ಳುವ
ಹೊತ್ತಿಗೆ
ಮೇಲಿನ ಮಾತಾಡಿದ್ದು
ಮನಸ್ಸು
ಮಾರು ಗೆಲ್ಲದವ 
ಲೋಕ ಗೆದ್ದಾನೇ
ಹೇಡಿ................




ಬ್ರಹ್ಮಾಂಡದ ಭ್ರಮೆಗೆ
ಬಿದ್ದೆ
ತಂಬೆಲರು, ತಿಂಗಳ ಬೆಳಕು
ನಿನ್ನ ಮೊಗ
ಚೆನ್ನಾಗಿತ್ತು
ಭ್ರಮೆಯೇ
ನೀನೆಂದು
ತಿಳಿಯಲಿಲ್ಲ
ಅದು ತಿಳಿಯುವುದೂ ಇಲ್ಲ
ಯಾಕೆಂದರೆ 
ನೀನೂ ಕೂಡಾ 
ಜೀವಂತ ಇರುವವಳಲ್ಲ




'ಅನ್ಯತಾ ಶರಣಂ ನಾಸ್ತಿ'
ಕಾಲು ಹಿಡಿದೆ
ಅತ್ತು ಕರೆದೆ, ನಿನ್ನ 
ಪಾದ ಅಗಾಧ ಬೆಳೆಯುತ್ತಾ ಹೋಯಿತು
ತಲೆಯೆತ್ತಿ ನೋಡಿದರೆ
ನೀನಿಲ್ಲ ಅಲ್ಲಿ 
ಇದ್ದವಳು 
ನನ್ನ  ಜಗದಂಬೆ
ನಮ್ಮವ್ವ
ನಕ್ಕಳು
ಕನಸಲ್ಲಿ
ನೋಡಿದೆ
ನನ್ನ 
ಭವಿಷ್ಯ
ಎದೆ ಹಾಲೂಡಿದ ಅವಳ 
ಕೊಲ್ಲಲು ಹಿಡಿದಿದ್ದೆ
ಕೂರಂಬು
ನೀನೆಲ್ಲಿ ಹೋಗಿದ್ದೆ???????





ನದಿ ಕಾಡು 
ಊರೂರ ಬೀದಿ
ಅಲೆದು
ಬದುಕಿದೆ ಇಲ್ಲಿಯವರೆಗೆ
ಯಾಕೆಂದು ಇನ್ನೂ ತಿಳಿದಿಲ್ಲ
ಬದುಕುವುದು
ಸಾಯುವುದು 
ಕಷ್ಟ
ಸತ್ತಂತೆ ಬದುಕಬಹುದು
ಜೀವಂತ ಸಾಯುವುದು 
ಬಲು ಕಷ್ಟ




ವೈರಾಗ್ಯದ ಮೂರ್ತಿಗೆ
ಹಾರವಾಗುವ ಬಯಕೆಗೆ
ಹೂವಾದೆ
ಅವನೆಂದ
'ಅದನ್ನೂ ಬಿಟ್ಟವನು ನಾನು'
ನಾನೂ ಕಲ್ಲಾದೆ
ಅವನೂ ಕಲ್ಲಾಗಿದ್ದ.




ಗಡ್ಡ ಬಿಟ್ಟರೆ,
ಜಡೆ ಬೆಳೆದರೆ
ಮೈ ಕೊಳೆತರೆ, ದೇಹ ಬಿರಿತರೆ
ಕಾಣುವುದೇ
ಸತ್ಯ
ಯಾವುದಾ 
ದಾರಿ
ಅದರಲ್ಲಿ
ನಡೆಯಲಿಲ್ಲ
ತಿರುಗಿ ಹೋಗುವ ಬಾಗಿಲಿಗೆ
ತೆರುವ ಸುಂಕ
ಇದು 
ನೆನ್ನೆಯೋ
ನಾಳೆಯೋ
ಇಂದೋ???




ಮೈ ಕೈ ಪರಚಿಕೊಂಡು 
ಹೊರಳಾಡಿ ಬೂದಿಯಲ್ಲಿ
ಧೂಳು ಕೊಡವಿಕೊಂಡು
ನಡೆಯತ್ತಾ ಹೋದೆ
ಬರೇ ಅಸ್ತಿಪಂಜರಗಳೇ
ಕಾಣುತ್ತಿವೆ
ಸತ್ತಿರುವುದು
ಲೋಕವೋ
ನಾನೋ




ಕಡಲಾಳಕ್ಕೆ 
ಇಳಿಯಲಿಲ್ಲ
ಏರಲಿಲ್ಲ ವ್ಯೋಮ, ನಭ, ಬ್ರಹ್ಮಾಂಡ
ನೌಕೆಯೇರಿ 
ಸೇರಲಿಲ್ಲ
ಉಸಿರಿಲ್ಲದ ಜಾಗ
ತಿಲೋತ್ತಮೆಯರ
ಲೋಲುಪತೆ

ಚೆಂದ
ಗಾಣಿಸಿದ
ತೊಗಲು




ಅಂತಿಮವೇನು
ಜಗವ ಗೆದ್ದಾದ ಮೇಲೂ
ಉಳಿಯುವ ಪ್ರಶ್ನೆ
ಕಾಲಿಗೆಡವಿ
ತೊಡರುವ
ಪಿಶಾಚಿಗಳು
ಸಾವಿರಾರು




ಸೋತೋ ಗೆದ್ದು
ಗೆದ್ದೋ ಸೋತು
ಹಳಸಿದವರು ಯಾರು
ನಾನು ಸತ್ಯವೋ
ನೀನು ಸತ್ಯವೋ
ಎಲ್ಲವೂ
ಸುಳ್ಳೋ...............
............................................

.....................................................................



3 comments:

  1. ಸುಳ್ಳು ನಿಜಗಳ ಕಂದಕದಲ್ಲಿ ಜೀವನವೊಂದನ್ನು ಮರೆತೆಯಾ ಗೆಳೆಯಾ...........ಭ್ರಮಾತ್ಮಕವಾಗಿ ಬದುಕು ಸಾಗಿಸುವುದು ಕಷ್ಟವಾದರೂ, ಹಿತ ಎನ್ನಿಸಬಹುದು. ಆದರೆ, ಅದಕ್ಕಲ್ಲ ನಾವು ಹುಟ್ಟಿದ್ದು ಅಲ್ಲವೆ?

    ReplyDelete
  2. ಇದ್ದು ಇಲ್ಲದಂತಿರುವ, ಬದುಕಿದ್ದು ಸತ್ತಂತಿರುವ, ಜೀವಂತ ಶವವಾಗಿರುವ, ಸತ್ತು ಬದುಕುವವರು ನಾವೆಲ್ಲಾ. ಗೆದ್ದೋ ಸೋತೋ, ಸೋತೋ ಗೆದ್ದೋ ಮಾಡುವುದಾದರೂ ಏನು? ಸೋಲು-ಗೆಲುವು ಮುಂದೇನು? ಇಂತಹ ಹತ್ತು ಹಲವು ಪ್ರಶ್ನೆಗಳು ನಿನ್ನ ಮತ್ತು ನನ್ನಲ್ಲೂ ಸೇರಿದಂತೆ ಬಹುತೇಕರಲ್ಲಿ ಸುಪ್ತವಾಗಿ ಮೌನಕ್ರಾಂತಿಯನ್ನ ಮಾಡುತ್ತಲೇ ಇರುತ್ತವೆ. ನೇರವಾಗಿ ಮನಸ್ಸಿನೊಂದಿಗೆ ಸಂಘರ್ಷಕ್ಕಿಳಿಯುತ್ತವೆ. ಪ್ರಶಾಂತವಾಗಿರುವ ಮನದ ಕಡಲನ್ನ ಸುಮ್ಮನೆ ಕದಡುತ್ತವೆ, ನೋಯಿಸುತ್ತವೆ, ಅದ್ಯಾಕೋ ಮನಸೇ ಕೊನೆಗೆ ಸಾಂತ್ವಾನ ಹೇಳಿ ಸಮಾಧಾನಿಸುತ್ತದೆ. ಸಮಾಧಾನದ ಸೋಗು ಮತ್ತೆ ಸೊರಗಲು ಬಹಳ ಕಾಲವೂ ಬೇಡ. ಮತ್ತದೇ ಪ್ರಶ್ನೆ, ಮತ್ತದೇ ಸಂಘರ್ಷ, ಮತ್ತದೇ ಸಮಾಧಾನ, ಮತ್ತದೇ ಹುಚ್ಚುಚ್ಚು ಯಾತನೆ ....!!! ನನಗೂ ತುಂಬಾ ಕಾಡುತ್ತೆ ಕಣೋ ದಯಾ...

    ReplyDelete