Saturday, August 20, 2011


ವಿ.ಭಟ್’, ಆರ್.ಬಿ - ಎಂಬ ಕುತೂಹಲವೂ, ಅಣ್ಣಾ ಹಜಾರೆ ಹೋರಾಟವೂ..

ಗಣಿ ಕಪ್ಪದ ವಿಚಾರವಾಗಿ ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನಪತ್ರಿಕೆಯ ಸ್ಪೋಟಕ ವರದಿ ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿದೆ. ಇದರೊಂದಿಗೆ ಕನ್ನಡ ಮಾಧ್ಯಮ ಜಗತ್ತಿನ ಹಲವು ಗುಸುಗುಸುಗಳಿಗೆ ಸಧ್ಯಕ್ಕೆ ಒಂದು ಮೂರ್ತರೂಪ ದೊರೆತಿದೆ. ಗಣಿಹಗರಣದಲ್ಲಿ ಕೇವಲ ರಾಜಕಾರಣಿಗಳು, ಉದ್ಯಮಿಗಳು ಹಾಗೂ ಸರ್ಕಾರಿ ಅಧಿಕಾರಿಗಳೇ ಅಲ್ಲದೇ ಪ್ರಜಾತಂತ್ರ ವ್ಯವಸ್ಥೆಯ ಅನಭಿಷಕ್ತ ದೊರೆಗಳಾದ ಘಟಾನುಘಟಿ ಪತ್ರಕರ್ತರೂ ಶಾಮೀಲಾಗಿರುವ ವಿಚಾರ ಈ ಮೂಲಕ ಬೆಳಕಿಗೆ ಬಂದಿದೆ. ಬಳ್ಳಾರಿಯ ಮಧುಶ್ರೀ ಎಂಟರ್ ಪ್ರೈಸಸ್ ಎಂಬ ಕಂಪನಿ 31 ಜುಲೈ 2010 ರಂದು ಆರ್.ಬಿಗೆ 10 ಲಕ್ಷ , 4ನೇ ಆಗಸ್ಟ್ 2010 ರಂದು ವಿ.ಭಟ್ಗೆ 25 ಲಕ್ಷ ಹಾಗೂ 9ನೇ ಆಗಸ್ಟ್ 2011 ರಂದು ವಿ.ಭಟ್ಗೆ 50 ಲಕ್ಷ ಮತ್ತು ಬೆಂಗಳೂರು ಮಿರರ್/ಸಂಜಯ್ ಸರ್ ಗೆ 5 ಲಕ್ಷ , 31 ನೇ ಆಗಸ್ಟ್ ನಂದು ಮತ್ತೆ ಡೆಕ್ಕನ್ ಕ್ರಾನಿಕಲ್ಗೆ 25 ಲಕ್ಷ , ಪ್ರೆಸ್ ಕ್ಲಬ್(ಹರೀಶ್)ಗೆ 5 ಲಕ್ಷ ಹಾಗೂ ಸಂಜಯ್ ಸರ್(ಬೆಂಗಳೂರು ಸ್ಥಳೀಯ ಪತ್ರಿಕೆಗಳಿಗೆ) 1.52 ಲಕ್ಷ ರೂಪಾಯಿಗಳನ್ನು ಪಾವತಿ ಮಾಡಿರುವ ವಿಷಯ ಕಂಪನಿ ದಾಖಲಾತಿಗಳಿಂದ ಬಯಲಾಗಿದೆ. ಲೋಕಾಯುಕ್ತ ತನಿಖಾ ತಂಡದ ಮುಖ್ಯಸ್ಥರಾಗಿದ್ದ ಯು.ವಿ.ಸಿಂಗ್ ಸಲ್ಲಿಸಿರುವ ವರದಿಯಲ್ಲಿ ಈ ಅಂಶಗಳು ಹೊರಬಂದಿವೆ.

ಗಣಿ ಕಪ್ಪ ಪಡೆದಿದ್ದಾರೆನ್ನಲಾದ ಹೆಸರುಗಳಲ್ಲಿ ಕೆಲವು ಹೆಸರುಗಳು ಈಗ ಭಯಂಕರ ಚರ್ಚೆಗೆ ಗ್ರಾಸವಾಗಿವೆ. ಅವು ವಿ.ಭಟ್ ಹಾಗೂ ಆರ್.ಬಿ. ಪತ್ರಿಕೋದ್ಯಮದಲ್ಲಿರುವ ಅಥವಾ ಪತ್ರಿಕೋದ್ಯಮದ ಬಗ್ಗೆ ಆಸಕ್ತರಾಗಿರುವ ಎಲ್ಲರಲ್ಲೂ ಈಗ ಮೂಡಿರುವ ಪ್ರಶ್ನೆ- ಈ ಇಬ್ಬರೂ ಅವರೋ....?’
ಒಬ್ಬರು ನೋಡ್ತಾರ್ಯಿ ಏನೇನ್ ಮಾಡ್ತೀವಿ ಎಂದುಕೊಂಡು ಬಂದು ಮಾಡಬಾರದ್ದನ್ನೆಲ್ಲಾ ಮಾಡುತ್ತಿರುವ ನಾಡಿನ ಒಂದು ಮುಖ್ಯದಿನಪತ್ರಿಕೆಯ ಹಾಗೂ ಒಂದು ವಾಹಿನಿ (ನಿರಂತರ ಬಂಗಾರ) ಯ ಸಂಪಾದಕರು’. ಮತ್ತೊಬ್ಬರು ವಾರಕ್ಕೊಮ್ಮೆ ಹಾಯ್ ಹೇಳುವ ಶಿಖರಸೂರ್ಯ..! ಮತ್ತೊಂದು ರೋಚಕ ವಿಷಯವೆಂದರೆ ಈ ಇಬ್ಬರೂ ಮಹಾನುಭಾವರಿಗೂ ಒಬ್ಬರ ಮುಖ ಒಬ್ಬರು ನೋಡದಷ್ಟು ಬದ್ಧ ವೈರತ್ವ.. ಆದರೆ ಕಪ್ಪ ಪಡೆದ ವಿಚಾರದಲ್ಲಿ ಇಬ್ಬರೂ ಒಂದೇ ಸಾಲಿನಲ್ಲಿ ನಿಂತಿದ್ದಾರೆ. ಸಂಪಾದಕರು ವಿ.ಕ ದಲ್ಲಿದ್ದಾಗಲಂತೂ ಏನೆಲ್ಲ ಮಾಡಬಹುದಾಗಿತ್ತೋ ಅದನ್ನೆಲ್ಲಾ ಮಾಡಿಯಾಯಿತು. ಈಗ ಕ.ಪ್ರ ದ ಉದ್ಧಾರದಲ್ಲಿ ತೊಡಗಿದ್ದಾರೆ. ಇವರ ಮಾತೋ ಬೆಣ್ಣೆಯಲ್ಲಿ ಕೂದಲು ಎತ್ತಿದ ಹಾಗೆ. ತಾವೆಷ್ಟು ಪ್ರಾಮಾಣಿಕ ಎಂಬುದು ಅವರ ಮಾತು, ವಿನಯದಲ್ಲೇ ತಿಳಿಯಬೇಕು; ಹಾಗೆ ಅಳೆದು ತೂಗಿ ಆಡುವ ಮಾತು. ಇನ್ನು ಇವರ ಬರವಣಿಗೆ ಹಾಗೂ ಇವರ ದೃಷ್ಟಿ ಈಗ ನೇರ ದಿಟ್ಟ ನಿರಂತರ’.

ಇನ್ನು ಹಾಯ್ ಹೇಳುವ ಈ ದಿನಕರ ಸೆಲೆಬ್ರಿಟಿ ಬೇರೆ. ಸದಾ ಟಿ.ವಿ ಯ ಠೀವಿಯಲ್ಲಿರುವ ಇವರು ತಮ್ಮ ಮಾತಿನಿಂದಲೇ ಮೋಡಿಹಾಕುವ ಮೋಡಿಗಾರರು.. ಈ ಮಹಾನುಭಾವರು  ಅಲ್ಲಾ ಕಣ್ರೀ.., ಆ ಅಣ್ಣಾ ಹಜಾರೆ ಅನ್ನೋ ಆ ವಯಸ್ಸಾಗಿರೋ ಅಜ್ಜಾನೇ ದೇಶಕ್ಕೋಸ್ಕರಾ ಮನೆ ಮಠ ಬಿಟ್ಟು ಅದ್ಯಾವ್ದೋ ಮೈದಾನ್ದದಲ್ಲಿ ಉಪವಾಸ ಕುಂತಿರ್ವಾಗ ನಮ್ದ್ ಯಾವ್ದ್ರೀ ಸೆಲ್ಫ್ ನೆಸ್ಸುಎಂದು ತನ್ನದೇ ಧಾಟಿಯಲ್ಲಿ ಹೇಳಿ ಬಿಟ್ಟರೆ ಸಾಕು ಅವರ ಲಕ್ಷಾಂತರ ಓದುಗರು ಅಣ್ಣಾ ಹಜಾರೆ ಬಗ್ಗೆಯೂ ಜೊತೆಗೆ ಇವರ ಬಗ್ಗೆಯೂ ರಾಷ್ಟ್ರಪ್ರೇಮ ತಾಳುತ್ತಾರೆ, ಮನೆ ಮಠ ಬಿಟ್ಟು ಹೋರಾಟಕ್ಕಾಗಿ ಬೀದಿಗಿಳಿಯುತ್ತಾರೆ!!!

ಇಂಥಾ ಪ್ರಭಾವಿಗಳು ಈಗ ಕಪ್ಪದ ಆರೋಪ ಹೊತ್ತು ನಿಂತಿದ್ದಾರೆ. ಇವರು ಯಾರೋ ಅಧಿಕಾರಿಯೋ, ರಾಜಕಾರಣಿಯೋ ಆಗಿದ್ದರೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವೇ ಇರಲಿಲ್ಲವೇನೋ, ಯಾಕೆಂದರೆ ನಮ್ಮ ನಾಡು ರಾಜಕೀಯ ಭ್ರಷ್ಟತೆಯನ್ನು ಒಪ್ಪಿತ ವಿಷಯವಾಗಿಸಿಕೊಂಡು ದಶಕಗಳೇ ಕಳೆದು ಹೋಗಿವೆ. ಆದರೆ ಇವರು ನಾಡಿಗೆ ಬುದ್ದಿ ಹೇಳುವ ಪತ್ರಿಕಾಂಗದ ಪ್ರತಿನಿಧಿಗಳು. ಹಾಳೆಯ ಮೇಲೆ ಅಲಿಖಿತ ಸಂವಿಧಾನ ಬರೆಯುವ ಭಾರತದ ಭಾಗ್ಯವಿಧಾತರು. ಇವರೇ ಹೀಗೆ ಗಣಿ ಹೇಸಿಗೆಗಾಗಿ ಕೈಚಾಚಿದ್ದು ಎಷ್ಟು ಸರಿ ಎಂಬುದು ಈಗ ದೊಡ್ಡ ಪ್ರಶ್ನೆ..


ಒಂದು ಕಡೆ ಅಣ್ಣಾ ಹಜಾರೆ ಎಂಬ 74 ವರ್ಷದ ಹಿರಿಯ ಜೀವ ಹೊಟ್ಟೆಗೆ ಅನ್ನ ನೀರು ಬಿಟ್ಟು ರಾಮಲೀಲಾ ಮೈದಾನದಲ್ಲಿ ಉಪವಾಸ ಕುಂತಿರುವಾಗ ಗಣಿ ಹೇಸಿಗೆ ತಿಂದವರ ಹೊಲಸು ಹೊರಬಂದಿದೆ. ಹೊಲಸು ತಿಂದವರು ಯಾಕೋ ತುಟಿ ಬಿಚ್ಚುತ್ತಿಲ್ಲ; ಬಹುಶಃ ಬಾಯಿ ಬಿಟ್ಟರೆ ಹೊಲಸಿನ ವಾಸನೆ ಗಬ್ಬೆಂದು ಬರಬಹುದು (ಬಾಯಿ ಬಿಟ್ಟರೆ ಬಣ್ಣಗೇಡೂ..). ಇದೊಂದು ರೀತಿಯ ವರ್ತಮಾನದ ವಿರೋಧಾಭಾಸ, ಐರನಿ. ಒಂದು ಕಡೆ ಭ್ರಷ್ಟಾಚಾರದ ವಿರುದ್ಧದ ಭಾರೀ ಹೋರಾಟ , ಇನ್ನೊಂದೆಡೆ ಭ್ರಷ್ಟಾಚಾರದ ವಿರುದ್ಧ ಮಾತನಾಡಲು ಧನಿ ಕಳೆದುಕೊಳ್ಳುತ್ತಿರುವ ಪತ್ರಕರ್ತರು.

ಇದು ಈಗ ಹೊರಗೆ ಬಂದಿರುವ  ಹಗರಣಗಳು ಕೇವಲ ಸಣ್ಣ ಪ್ರಮಾಣದವಷ್ಟೇ. ಇನ್ನೂ ಕೋಟ್ಯಾಂತರ ರೂಪಾಯಿಗಳನ್ನು ನುಂಗಿರುವ ಬಗ್ಗೆ ಯಾವುದೇ ಆಧಾರಗಳಿಲ್ಲದ ಕಾರಣ ಅವೆಲ್ಲಾ ನಿರಾಧಾರ ಆರೋಪಗಳು!? ಪ್ರತಿತಿಂಗಳೂ ಮಾಮೂಲಿಯಾಗಿ ಇವರ ಖಾತೆ ಸೇರುವ ಹಣಕ್ಕೆ ಲೆಕ್ಕ-ಪುಕ್ಕವಿಲ್ಲ. ಹೀಗಾಗಿ ಇಲ್ಲಿಯ ವರೆಗೆ ಇವರು ಪೇಪರ್ರಿನಿಂದ ಪ್ರಾಮಾಣಿಕವಾಗಿ ದುಡಿದಿದ್ದೆಷ್ಟು, ಅಕ್ರಮವಾಗಿ ಗಳಿಸಿಕೊಂಡಿದ್ದೆಷ್ಟು ಬಹಿರಂಗಗೊಳ್ಳಬೇಕಿದೆ. ಈ ಮಹನೀಯರಿಗೆ ಇನ್ನೂ ಅಲ್ಪ ಸ್ವಲ್ಪವಾದರೂ ಮಾನ ಮರ್ಯಾದೆ ಎಂಬುದು ಉಳಿದಿದ್ದರೆ ತಮ್ಮ ಆಸ್ತಿ ವಿವರ ಘೋಷಿಸಲಿ ಅಥವಾ ಈಗಲಾದರೂ ತಮ್ಮ ತಪ್ಪನ್ನು ಒಪ್ಪಿಕೊಂಡು ನಾಡಿನ ಜನತೆಯ ಕ್ಷಮೆಯಾಚಿಸಿ ತಲೆ ಬೋಳಿಸಿಕೊಂಡು ದಕ್ಷಿಣಾಭಿಮುಖವಾಗಿ ಹೋಗಿ ಸಮುದ್ರಬಿದ್ದು ಸಾಯಲಿ.

ಇದು ಕೇವಲ ಸದ್ಯಕ್ಕೆ ಬೆತ್ತಲಾಗಿರುವ ಇವರ ಹಗರಣ. ಆದರೆ ಕೇವಲ ಇವರಷ್ಟೇ ಹೊಲಸು ತಿಂದಿರುವವರು ಎಂದಲ್ಲ. ಇಂದಿನ ಮಾಧ್ಯಮ ಜಗತ್ತಿನ ಬಹುತೇಕ ಜನಪ್ರಿಯ ಪತ್ರಕರ್ತರೂ ಹೊಲಸು ಬಾಯಿಯವರೇ ಎಂದರೆ ಅದು ಜನರಲೈಸ್ ಆಗಿಬಿಡುತ್ತದೆ, ಯಾಕೆಂದರೆ ಗ್ರಹಚಾರಕ್ಕೆ ದಶಕಗಳಿಂದ ಪತ್ರಿಕೋದ್ಯಮದಲ್ಲಿದ್ದರೂ ಇಂದಿಗೂ ಶುದ್ಧಹಸ್ತರಾಗಿಯೇ ಉಳಿದಿರುವವರೂ ನಮ್ಮ ಜೊತೆಯೇ ಇದ್ದಾರೆ. ಹೀಗಾಗಿ ಎಲ್ಲರೂ ಭ್ರಷ್ಟರಲ್ಲ ಎನ್ನುವ ಭರವಸೆಯಾದರೂ ನಮ್ಮೊಂದಿಗಿದೆ.

ಇನ್ನು ಭ್ರಷ್ಟಾಚಾರಕ್ಕಿಂತಲೂ ಹೊಲಸು ತಿನ್ನುವ ಮಟ್ಟಕ್ಕೆ ಸಮಯಸಾಧಕ ವಾಹಿನಿಗಳು ಇಂದು ಇಳಿದಿವೆ. ಇವುಗಳ ಹೊಲಸು ಎಲ್ಲಿಗೆ ತಲುಪಿದೆ ಎಂದರೆ ಇವುಗಳ ಮಾಲೀಕರ ಗುಣಗಾನವೇ ಇವುಗಳ ಮುಖ್ಯ ಉದ್ಯೋಗವಾಗಿದೆ. ಇನ್ನು ಈ ಮಾಲೀಕರ ಪಕ್ಷ ಹಾಗೂ ಅಭಿಪ್ರಾಯಗಳು ವಾಹಿನಿಗಳ ಮೂಲಕ ನೇರವಾಗಿ ಹೇರಲ್ಪಡುತ್ತಿವೆ. ಕೆಲವೇ ತಿಂಗಳುಗಳ  ಹಿಂದೆ ಮನೆಮಾತಾಗಿದ್ದ ಕುರುಚಲು ಗಡ್ಡದ, ಕೃಷ ದೇಹದ ವ್ಯಕ್ತಿ ಇಂದು ಸ್ವಂತ ಚಾನೆಲ್ ಒಂದನ್ನು ತರುತ್ತಿದ್ದಾರೆ ಎಂದರೆ ಇವರ ನೈಜ ಆದಾಯ ಎಷ್ಟು?, ಇವರ ಅಕ್ರಮ ಗಳಿಕೆ ಎಷ್ಟು? ಎಂಬ ಕೆಟ್ಟ ಕುತೂಹಲ ಮೂಡುವುದು ಸಹಜವೇ.

ಪತ್ರಿಕೆ ಹಾಗೂ ಚಾನೆಲ್ ಗಳನ್ನು ಸ್ಥಾಪಿಸಲು ಇರುವ ನಿಯಮಗಳು ಸಡಿಲಾಗಿರುವ ಕಾರಣ ಇಂದು ಒಬ್ಬ ಶಾಸಕ, ಒಬ್ಬ ಸಂಸದ ಒಂದು ಚಾನೆಲ್, ಒಂದು ಪತ್ರಿಕೆಯನ್ನು ಹೊಂದಿ ಅವುಗಳನ್ನು ತಮ್ಮ ಮುಖವಾಣಿಯಾಗಿಸಿಕೊಳ್ಳುತ್ತಿರುವುದು ಕೆಟ್ಟ ಬೆಳವಣಿಗೆ. ರಾಜಕೀಯ ಪಕ್ಷಗಳ ತುತ್ತೂರಿಗಳಾಗುತ್ತಿರುವ ಪತ್ರಿಕೆಗಳು, ಚಾನೆಲ್ ಗಳು ಅವುಗಳಿಗೆ ಸೊಗಸಾದ ರಾಗಹಾಡುವ ಇಂಥಾ ಮಹಾನುಭಾವ ಭ್ರಷ್ಟ ಸಂಪಾದಕರು. ಇವೆಲ್ಲದರ ನಡುವೆ ಮಳೆ ಚಳಿ ಎನ್ನದೇ ಉಪವಾಸ ಬಿದ್ದಿರುವ ಅಣ್ಣಾ ಹಜಾರೆ ಎಂಬ ಹಿರಿಯಜ್ಜನ ಹೋರಾಟ.


ಇಷ್ಟೆಲ್ಲಾ ಆದರೂ ಸಾಮಾನ್ಯ ಜನಕ್ಕೆ ಇದು ಏನೂ ಅಲ್ಲ. ಯಾಕೆಂದರೆ ಯಾವನೋ ವಿ.ಭಟ್, ಆರ್.ಬಿ ಹೊಲಸು ತಿಂದರೆ ಜನಕ್ಕೇನಾಗಬೇಕು...??? ತಮ್ಮ ಮನೆ, ತಮ್ಮ ಮಕ್ಕಳು, ತಮ್ಮ ಕ್ಷೇಮವಷ್ಟೇ ಜನಕ್ಕೆ ಮುಖ್ಯ..!! ರಾಮರಾಜ್ಯ ಆಳಿದ್ರೂ ರಾಗಿಬೀಸೋದು ತಪ್ಪಲ್ಲ ಎಂಬ ಧೋರಣೆ ಹೊಂದಿರುವ ನಮ್ಮ ಜನರ ಮನಸ್ಸಿನಲ್ಲಿ ಮೊದಲು ಕಿಚ್ಚು ಹೊತ್ತಬೇಕಿದೆ. ಆ ಕಿಚ್ಚಿನಿಂದ ಮೊದಲು ಜನಗಳಮನದಾಳದಲ್ಲಿ ಬೇರು ಬಿಟ್ಟಿರುವ ಸ್ವಾರ್ಥ, ಭ್ರಷ್ಟತೆಗಳು ಮೊದಲು ಬೆಂದು ಬೂದಿಯಾಗಬೇಕಿದೆ. ಇದಲ್ಲದೇ ಮನಸ್ಸಿನಲ್ಲಿ ಭ್ರಷ್ಟವಾಗಿದ್ದು ಹೊರಗಿನ ಭ್ರಷ್ಟಚಾರದ ವಿರುದ್ಧ ಧಿಕ್ಕಾರ ಕೂಗುವ ಧನಿ ಬರುವುದಾದರೂ ಎಲ್ಲಿಂದ???????

1 comment:

  1. ಮುಂದೊಂದು ದಿನ ಪರ್ತಕರ್ತರು ಒಳಗೊಂಡಂತೆ ಭ್ರಷ್ಟರ ವಿರುದ್ಧ ಮಹಾನ್ ಜನಕ್ರಾಂತಿ ಆಗುತ್ತೆ ಅನ್ನೊದಕ್ಕೆ ಸಾಗರದಲೆಯಂತೆ ಉಕ್ಕುತಿರುವ ಈ ಅಣ್ಣನ ಕ್ರಾಂತಿಯೇ ಸಾಕ್ಷಿ. ಜನರಲ್ಲಿ ಸ್ವಾರ್ಥತೆ, ಭ್ರಷ್ಟತೆ ಬೇರೂರಿದೆ ನಿಜ. ಅದನ್ನು ಕಿತ್ತು ಹಾಕುವ ಕಾಲ ಬರುತ್ತೆ ಅನ್ನೊ ಆಶಾವಾದ ಮೂಡಿದ್ದು ಅಣ್ಣನ ಕ್ರಾಂತಿಯಿಂದ. ಜನರೇ ದಂಗೆ ಏಳೋವರೆಗೂ ಯಾರೂ ಏನೂ ಮಾಡೊಕಾಗಲ್ಲ. ನಾಳೆಯ ನಂಬಿಕೆಯಲ್ಲಿ ಸುಭಿಕ್ಷೆಯ ಜೀವನ ಅರಸುತಾ............

    ReplyDelete