Monday, August 15, 2011

ಬೆನ್ನೆಲುಬಿನ ಬೆನ್ನುನೋವು; ಸಣ್ಣ ಹಿಡುವಳಿಯ ಸಂಕಟ
 ಮ್ಮ ನಾಡಿನ ಕೃಷಿಯ ಬಗ್ಗೆ ಯೋಚಿಸುವಾಗೆಲ್ಲ ಒಂದು ರೀತಿಯ ಖಿನ್ನತೆ ಕಾಡುತ್ತದೆ. ನಮ್ಮ ರೈತನ ಬಗ್ಗೆ ಯೋಚಿಸುವಾಗ ನಮ್ಮ ಕಣ್ಣ ಮುಂದೆ ಮೂಡುವ ಚಿತ್ರ ಬಿಳಿ ಬಿಳಿ ಬಟ್ಟೆ ತೊಟ್ಟು, ದಷ್ಟ ಪುಷ್ಟವಾಗಿರುವ ವ್ಯಕ್ತಿಯದ್ದಲ್ಲ , ಬದಲಾಗಿ ಸಾವಿರಾರು ತೂತುಗಳು ಬಿದ್ದಿರುವ ಬನಿಯನ್ನೋ ಅಥವಾ ಕಂದು ಬಣ್ಣಕ್ಕೆ ಬಂದಿರುವ ಮಾಸಲು ತೋಳಿಲ್ಲದಂಗಿಯನ್ನೋ ತೊಟ್ಟು ಹಣೆಗೆ ಕೈಯಾನಿಸಿ ಮೋಡ ನೋಡುತ್ತಾ ಕುಳಿತ ಬಡಕಲು ದೇಹದ ಬಡಪಾಯಿ ವ್ಯಕ್ತಿಯ ಚಿತ್ರ.
ಇದು ಯಾಕೆ ಹೀಗೆ ಎಂದು ಯೋಚಿಸುವಾಗಲೆಲ್ಲಾ ಕಾಡುವುದು ನನ್ನೂರಿನ ಹಾಗೇ ನನ್ನೂರಿನಂಥಾ ಭಾರತದ ಲಕ್ಷಾಂತರ ಹಳ್ಳಿಗಳ ಸಣ್ಣಹಿಡುವಳಿದಾರನ ಸಂಕಷ್ಟಗಳು. ಭಾರತದ ಬೆನ್ನೆಲುಬೆಂದು ಕರೆಯಲಾಗುವ ಕೃಷಿ ಕ್ಷೇತ್ರದ ಬೆನ್ನೆಲುಬು ಈ ಸಣ್ಣ ಹಿಡುವಳಿದಾರ. ಭಾರತದಲ್ಲಿ ದೊಡ್ಡ ಹಿಡುವಳಿಯ, ಜಮೀನ್ದಾರೀ ಕೃಷಿಕರಿಗೆ ಈಗ ಕೃಷಿಯನ್ನೇ ನೆಚ್ಚಿ ಬದುಕುವ ಅನಿವಾರ್ಯತೆ ಇಲ್ಲ. ಆದರೆ ಆ ಅನಿವಾರ್ಯತೆ ಇನ್ನೂ ನಮ್ಮ ಬಡ ಸಣ್ಣ ಹಿಡುವಳಿದಾರನಿಗಿದೆ. ಯಾಕೆಂದರೆ ಬೆಳೆದೇ ತಿನ್ನಬೇಕಾದ ಅನಿವಾರ್ಯತೆ ಇರುವ ಈತನ ಹೆಂಡತಿ ಯಾವತ್ತೂ ನಾಲ್ಕೆಳೆಯ ಚಿನ್ನದ ಸರಕ್ಕೆ ಕನಸನ್ನೂ  ಕಾಣಲಾರಳು. ಇಂದು ಸಣ್ಣಹಿಡುವಳಿದಾರನ ಸಮಸ್ಯೆಗಳು ಆತನ ಸಾವಿನ ನಂತರವೂ ಸಾಯದಷ್ಟು ಪೆಡಂಭೂತಗಳಾಗಿವೆ.
ಗೊತ್ತಿರುವ ಕಾರಣಗಳು
ಭಾರತದ ಸಣ್ಣಹಿಡುವಳಿದಾರನ ಸಮಸ್ಯೆಗಳಿಗೆ ಕಾರಣಗಳು ನಮಗೆ ಗೊತ್ತಿರುವಂತವೇ ಆಗಿವೆ. ಇವು ಗೊತ್ತಿದ್ದೂ ನಮ್ಮ ಪರಿಸ್ಥಿತಿ ಸುಧಾರಿಸದೇ ಇರುವುದು ದುರಂತ. ಸಣ್ಣ ಹಿಡುವಳಿದಾರನ ಮುಖ್ಯ ಸಮಸ್ಯೆ ಅವನ ಹೆಸರಿನಲ್ಲಿಯೇ ಇದೆ. ಅದು ಸಣ್ಣ ಹಿಡುವಳಿ! ಈ ರೈತ ಹೊಂದಿರುವ ಭೂಮಿಯ ಪ್ರಮಾಣ ಕಡಿಮೆ. ಇದೇ ಕಾರಣಕ್ಕೆ ಆತ ಪಡೆದುಕೊಳ್ಳುವ ಉತ್ಪತ್ತಯೂ ಕಡಿಮೆ. ಹೀಗಾಗಿ ಒಂದು ವರ್ಷ ಬೆಳೆ ಕೈಕೊಟ್ಟರೂ ಅದನ್ನು ತಾಳಿಕೊಳ್ಳುವ ಶಕ್ತಿ ಬಡಪಾಯಿ ಸಣ್ಣಹಿಡುವಳಿದಾರನಿಗಿಲ್ಲ. ಕ್ಲೀಷೆಯಾಗಿಹೋಗಿರುವ ಭಾರತದ ಮಾನ್ಸೂನ್ ರೈತರೊಂದಿಗೆ ಆಡುವ ಜೂಟಾಟವೂ ಮತ್ತೊಂದು ಭೀಕರ ಕಾರಣ ಸಣ್ಣ ಹಿಡುವಳಿದಾರನ ಸಂಕಷ್ಟಕ್ಕೆ. ಹೊತ್ತಿಗೆ ಸರಿಯಾಗಿ ಆಗದ ಮಳೆ, ಅತಿ ವೃಷ್ಟಿಯಿಂದ ಒಮ್ಮೆ ಬೆಳೆಹಾನಿಯಾದರೆ , ಅನಾವೃಷ್ಟಿಯಿಂದ ಬೆಳೆಹಾನಿ. ಇದಕ್ಕೆ ಶಾಸ್ತ್ರದ ಪರಿಶೀಲನೆ ಮಾಡಿ ಪುಡಿಗಾಸಿನ ಚೆಕ್ಕು ನೀಡುವ ಸರ್ಕಾರ. ದುರಂತ ಎಂದರೆ ಈ ಚೆಕ್ಕು ಹಾಕಲು ಬ್ಯಾಂಕ್ ಖಾತೆ ಇಲ್ಲದ ರೈತ ಬ್ಯಾಂಕ್ ಖಾತೆ ತೆರೆಸಲೇ ಈ ರೈತನ ಈ ಚೆಕ್ ನಲ್ಲಿರುವ ಹಣ ಸರಿಹೋಗಿರುತ್ತದೆ.
ಇನ್ನು ನಮ್ಮಲ್ಲಿ ಕೃಷಿ ಎಂದರೆ ಅವಿದ್ಯಾವಂತರ, ಬಡಪಾಯಿಗಳ, ಯಾವುದಕ್ಕೂ ಬಾರದವರು ಕೊನೆ ಆರಿಸಿಕೊಳ್ಳುವ ವೃತ್ತಿ ಎಂಬ ಭಾವನೆ ಇಂದಿನ ವರೆಗೂ ಹೋಗಿಲ್ಲ. ಉಳುವಾ ಯೋಗಿಯ ನೋಡಲ್ಲಿ ಹಾಡನ್ನು ರಾಷ್ಟ್ರಗೀತೆ, ನಾಡಗೀತೆಗಳ ನಂತರ ಹಾಡುವ ಹಾಡಾಗಿ ಮಾಡಿರುವ ಸಂದರ್ಭದಲ್ಲೂ ಇದು ತಪ್ಪಿಲ್ಲ. ಅನಕ್ಷರತೆ ಕೃಷಿಕನ ಅರ್ಹತೆಯಲ್ಲ , ಆದರೆ ಮೂರೋ ಆರೋ ಕ್ಲಾಸನ್ನು ಕಲಿತಿರುವ, ಪಟ್ಟಣದಲ್ಲಿ ಮೂರು ಸಾವಿರಕ್ಕೋ ಆರು ಸಾವಿರಕ್ಕೋ ತಿಂಗಳ ಸಂಬಳ ಎಣಿಸುವ ರೈತನ ಮಗ ತನ್ನಪ್ಪನ ಎರಡೋ ಮೂರೋ ಎಕರೆ ಭೂಮಿಯಲ್ಲಿ ಕೃಷಿ ಮಾಡಲು ಇಂದು ಸಿದ್ಧನಿಲ್ಲ. ಕೈ ಮಣ್ಣು ಮಾಡಿಕೊಂಡು ಉಳುವ, ಬಿಸಿಲಲ್ಲಿ ಕಳೆ ಹೆಕ್ಕುವ , ಹೆಂಟೆ ಹೊಡೆಯುವ, ಬಡಕಲು ದನಗಳನ್ನು ಮೇಯಿಸುವ ಕೆಲಸ ಬೇಕಾಗಿಲ್ಲ. ಆದರೆ ಇದೇ ಈತ ಪಟ್ಟಣದಲ್ಲಿ ಕಾಲ ಮೇಲೆ ಕಾಲು ಹಾಕಿಕೊಂಡು ಕೂತು ಸಂಬಳ ಪಡೆಯುವಾತ ಮಾತ್ರ ಖಂಡಿತ ಅಲ್ಲ!
ಸೋತ ಪ್ರಯೋಗಗಳು
ಸಹಜ ಕೃಷಿ, ಸಾವಯವ ಕೃಷಿಯಂಥಾ ಪ್ರಯೋಗಗಳು ಇಂದಿಗೂ ಬಡ ಸಣ್ಣ ಹಿಡುವಳಿದಾರನ ಕೈಹಿಡಿಯಲು ಸಾಧ್ಯವಾಗಿಲ್ಲವೆಂಬುದು ಅಪ್ಪಟ ಸತ್ಯ. ತನ್ನ ಅಂಗೈಯಗಲದ ಭೂಮಿಯಲ್ಲಿ ಸಹಜಕೃಷಿಗೆ ತೊಡಗಲು ರೈತ ಮುಂದಾದರೆ ಅದು ಹಾಸ್ಯಾಸ್ಪದವಾಗುತ್ತದೆ. ಫುಕವೋಕನ ರೀತಿಯಲ್ಲಿ ತೇವವಿದ್ದ ಒಂದಷ್ಟು ಜಾಗದಲ್ಲಿ ಗೋದಿ ಚೆಲ್ಲಿಹೋದರೆ ನಮ್ಮಲ್ಲಿ ಹಕ್ಕಿಗಳು ಒಂದು ಕಾಳೂ ಉಳಿಯದಂತೆ ಮೇಯುತ್ತವೆ; ಯಾಕೆಂದರೆ ನಮ್ಮ ಹಕ್ಕಿಗಳು ಜಪಾನಿನಂತೆ ಹೊಟ್ಟೆ ತುಂಬಿದ ಹಕ್ಕಿಗಳಲ್ಲ.!! ನಾಲಾ ನೀರು ಹರಿಯುವ ಪ್ರದೇಶಗಳಲ್ಲಿನ ನೀರಾವರಿ ಬೇಸಾಯದ ಸಣ್ಣ ಹಿಡುವಳಿದಾರನೂ ಪೂರ್ತಿಯಾಗಿ ತನ್ನ ಊಟವನ್ನು ತಾನು ಸೃಷ್ಟಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಾವಿರಾರು ರೂಪಾಯಿಗಳನ್ನು ರಾಸಾಯನಿಕ ಗೊಬ್ಬರಗಳಿಗಾಗಿ ವ್ಯಯಿಸುವ ರೈತ ಸಹಜ, ಸಾವಯವ ಕೃಷಿಯ ಅರ್ಥಪೂರ್ಣ ಪ್ರಯೋಗಕ್ಕೆ ಮುಂದಾಗುತ್ತಿಲ್ಲ. ಇದನ್ನು ಆಗುಮಾಡುವ ಕಾರ್ಯಕ್ಕೂ ಕೃಷಿ ತಜ್ಞರು , ಕೃಷಿ ಇಲಾಖೆ ಮುಂದಾಗುತ್ತಿಲ್ಲ. ಅದರದ್ದೇನಿದ್ದರೂ ಈಗ ಬೀಜ ಸಂಸ್ಕೃತಿಯನ್ನೇ ಹಾಳು ಮಾಡಲು ಹೊರಟಿರುವ ಕುಲಾಂತರಿಗಳ ಪ್ರಯೋಗಕಾರ್ಯ. ದೇಶದ ಆಹಾರದ ಬಗ್ಗೆ ಇರಲಿ ತನ್ನ ಮನೆಯ ಎಲ್ಲಾ ಹೊಟ್ಟೆಗಳನ್ನು ಪೂರ್ತಿಯಾಗಿ ತುಂಬಿಸಲೂ ಇಂದು ಬಡ ಸಣ್ಣ ಹಿಡುವಳಿದಾರನಿಂದ ಸಾಧ್ಯವಾಗುತ್ತಿಲ್ಲ.  ಮುಂದೆ ಬರುವ ಯಾವುದಾದರೂ ಸರ್ಕಾರ ಇಪ್ಪತ್ತೈದು ಕೆ.ಜಿ ಅಕ್ಕಿ ಕೊಡುವುದನ್ನು ನಿಲ್ಲಿಸಿದರೆ ಈ ಬಡಪಾಯಿ ರೈತ ಅತಂತ್ರನಾಗುತ್ತಾನೆ. ಕಾಳಿನ ಮೇಲಿನ , ತುಂಡು ಭೂಮಿಯ ಮೇಲಿನ ಅಧಿಕಾರವನ್ನೂ ಕಳೆದುಕೊಳ್ಳುವ ಮಟ್ಟಕ್ಕೆ ಇಂದು ಈ ಸಣ್ಣ ಹಿಡುವಳಿದಾರ ಬಂದಿದ್ದಾನೆ. ಬಿತ್ತಿದರೆ ಬೋದು ಕೂಡಾ ಸಿಗಲಾರದ ಭೂಮಿ ಎಂದು ಯಾರಿಗೋ ಪುಡಿಗಾಸಿಗೆ ಮಾರಿ , ಅದೇ ಜಾಗದಲ್ಲಿ ಬೋರು ಹೊಡಿಸಿ ಅಡಿಕೆ , ತೆಂಗು, ಬಾಳೆ ಬೆಳೆಯುವುದನ್ನು ತನ್ನ ಕಣ್ಣಿಂದಲೇ ನೋಡಿ ಹಲ್ಲ್ನೀರು ಕುಡಿಯುತ್ತಾನೆ.. ಹಾಗಾದರೆ ಈತ ಸೋತಿದ್ದೆಲ್ಲಿ??
ಭರವಸೆಗೆ ಚಿಗುರಿನ ಶಕ್ತಿ
ನಮ್ಮಲ್ಲಿ ಕೃಷಿ ಇಂದಿಗೂ ಒಂದು ಸಂಸ್ಕೃತಿ ಈ ಕಾರಣಕ್ಕೇ ಕೃಷಿ ಕ್ಷೇತ್ರದಲ್ಲಿ ಸಾವಿರಾರು ಕೋಟಿಗಳ ವಹಿವಾಟು ನಡೆದರೂ ಅದನ್ನಿನ್ನೂ ಕೃಷಿಉದ್ಯಮ ಎಂದು ನಾವು ಕರೆಯುತ್ತಿಲ್ಲ. ಭಾರತದ ರೈತನಿಗೆ ಭೂಮಿ ತಾಯಿ’, ಬೆಳೆಯುವ ಬೆಳೆ ಅನ್ನಪೂರ್ಣೆ. ಹೀಗಾಗಿ ಭಾರತೀಯ ಭಾವನೆಗಳಿಲ್ಲದ ಕೃಷಿಗೆ ನಮ್ಮಲ್ಲಿ ಆಸ್ಪದವೇ ಇಲ್ಲ . ಮತ್ತು ತರೆ ಮಾರಿನಿಂದ ತಲೆಮಾರಿಗೆ ಭೂಮಿ ಹಂಚಿಕೆಯಾಗುತ್ತಿದ್ದು, ಬೆಳೆಯುವ ಜನಸಂಖ್ಯೆ ಮತ್ತು ಬೆಳೆಯದ ಭೂಮಿ ಪರಿಕಲ್ಪನೆಯನ್ವಯ ಒಂದು ಕಾಲಕ್ಕೆ ಜಮೀನ್ದಾರರಾಗಿದ್ದ ಕುಟುಂಬವೂ ಕ್ರಮೇಣ ಸಣ್ಣಹಿಡುವಳಿಯಾಗುತ್ತದೆ. ನಮ್ಮಲ್ಲಿ ಸಮುದಾಯ ಕೃಷಿ ಪರಿಕಲ್ಪನೆಯೂ ಸಮರ್ಪಕವಾಗಿ ಮೂಡಿಬಂದಿಲ್ಲ. ಸಮಾನ ಮನಸ್ಕ ಮತ್ತು ಅಕ್ಕಪಕ್ಕದ ಜಮೀನುಗಳ ಸಣ್ಣ ಹಿಡುವಳಿದಾರರೆಲ್ಲಾ ಒಂದಾಗಿ ತಮ್ಮ ಭೂಮಿಯನ್ನು ಒಗ್ಗೂಡಿಸಿ ಸಮರ್ಪಕ ಸಾಮುದಾಯಿಕ ಕೃಷಿಗೆ ಮುಂದಾಗಿರುವ ಉದಾಹರಣೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತಿಲ್ಲ; ಇದು ಸಾಧ್ಯವಾಗಬೇಕಿದೆ.
ವ್ಯವಸ್ಥಿತವಾಗಿ ಯೋಜನಾ ರೂಪದಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಇಂದು ಸಣ್ಣಹಿಡುವಳೀದಾರನಿಗಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ  ಭೂಮಿ ಹಾಗೂ ಕಾಳಿನ ಮೇಲಿನ ಹಕ್ಕನ್ನೂ ಬಹುರಾಷ್ಟ್ರೀಯ ಕಂಪನಿಗಳ ಕೈಗಿಟ್ಟು ಅವರ ಗುಲಾಮರಾಗಿ ಬಾಲಬೇಕಾದ ಪರಿಸ್ಥತಿ ನಿರ್ಮಾಣಗೊಂಡರೆ ಅಚ್ಚರಿಯೇನೂ ಇಲ್ಲ. ಈಗಿನ ರೈತ ಸಂಘಟನೆಗಳು ತಮ್ಮ ರಾಜಕೀಯವನ್ನು ಬದಿಗೊತ್ತಿ ಈ ನಿಟ್ಟಿನಲ್ಲಿ ಯೋಚಿಸಬೇಕಿದೆ. ರಾಜಕೀಯದ ಯೋಚನೆಗಳಿಗಿಂತಾ ಇಂದು ಕಾಳಿನ ಹಕ್ಕು ಉಳಿಸಿಕೊಳ್ಳುವ ಕಾರ್ಯ ಆಗಬೇಕಿದೆ. ಹೆಗಲ ಮೇಲಿ ಹಸಿರು ಶಾಲು ಹಾಕುವ ರೈತ ಪೂರ್ತಿಯಾಗಿ ನೆಮ್ಮದಿ ಜೀವನ ನಡೆಸುವಂತಾಗಬೇಕಿದೆ. ಕೋಟ್ಯಾಧೀಶರಾಗದಿದ್ದರೂ ಜೀವನ ಮಟ್ಟದ ಸುಧಾರಣೆಗಾಗಿಯಾದರೂ ಸಣ್ಣ ಹಿಡುವಳಿದಾರರು ಒಂದಾಗಬೇಕಿದೆ. ವಿದ್ಯಾವಂತ ಯುವಕರು ಕೈ ಕೆಸರು ಮಾಡಿಕೊಳ್ಳಲು ಮುಂದಾಗಬೇಕಿದೆ. ಭಾರತದ ಭಾಗ್ಯವಿದಾತರು ಯಾರೋ ಅಲ್ಲ ನಮ್ಮ ರೈತರು ಎಂಬ ಸತ್ಯವನ್ನು ಸಾರಿಹೇಳಬೇಕಿದೆ.
-ದಯಾನಂದ,
#47, ಅಂಗನವಾಡಿ ಕೇಂದ್ರದ ಪಕ್ಕ,
ದರೋಗೌಡನ ಪಾಳ್ಯ, ಸಂಪಿಗೆಹೊಸಹಳ್ಳಿ ಅಂಚೆ,
ತುರುವೇಕೆರೆ ತಾ. ತುಮಕೂರು ಜಿಲ್ಲೆ.
ಪಿನ್-572225, ಸಂ-9945065060. ಮಿಂಚಂಚೆ-chamrajdaya@gmail.com

No comments:

Post a Comment