Monday, February 27, 2012

ಕವಿತೆ ಬಗೆಯುವ ಬಗೆ...

ಇದೊಂದು ರೀತಿಯ ಸಂಕಟದ ಕೆಲಸ....
ಕವಿಯಾದವನು ತನ್ನ ಕವಿತೆಯ ಬಗ್ಗೆ ತಾನೇ ಮಾತನಾಡುವುದಾದರೆ ಆತ ಕವಿತೆ ಬರೆಯುವುದಕ್ಕಿಂತಾ 'ಕವಿತೆಯ ಬಗ್ಗೆ' ಬರೆದುಕೊಂಡಿರುವುದೇ ಮೇಲು. ಕವಿಯಾದವನು ತನ್ನ ಕವಿತೆಯ ಬಗ್ಗೆ ತಾನೇ ಮಾತನಾಡುತ್ತಿದ್ದಾನೆಂದರೆ ಅವನ ಕವನದ ಸಂವಹನ ಶಕ್ತಿ ಅಷ್ಟರ ಮಟ್ಟಿಗೆ ಹಾಳಾಗಿದೆ ಎಂದೇ ಅರ್ಥ !? ಅದು ಕವಿಯ ದುರಂತ ನೆಲೆ. ಅಕಾರಣದ ಕಾಣದ ಗಮ್ಯ!
'ನನ್ನ ಕವಿತೆಗಳ ಬಗ್ಗೆ ನಾನು ಮಾತನಾಡಲಾರೆ, ನನ್ನ ಕವಿತೆಗಳೇ ಮಾತಾಡಬೇಕು' ಎಂಬ ನನ್ನ ಶಪಥವನ್ನು ನಾನು ಮುರಿಯಲು ಮೂರು ಮುಖ್ಯ ಕಾರಣಗಳಿವೆ.

ಮೊದಲನೆಯದು ನಾನು ಇತ್ತೀಚಿಗೆ ಬರೆಯುತ್ತಿರುವ ಕವಿತೆಗಳಿಗೆ ಒಂದಷ್ಟು ಜನ ಓದುಗರು ಸಿಕ್ಕಿದ್ದಾರೆ.!!
ಎರಡನೆಯದು ಈ ಓದುಗರು ನನ್ನ 'ಕವಿತೆಗಳ ತಲೆ ಬುಡ ಅರ್ಥವಾಗೋಲ್ಲ' ಎನ್ನುತ್ತಿರುವುದು.
ಮೂರನೆಯದು ನನ್ನಲ್ಲಿ ಇತ್ತೀಚಿಗೆ ಹುಟ್ಟುತ್ತಿರುವ ಹೊಸ ಬಗೆಯ ರೂಪಕಗಳ ಬಗ್ಗೆ ನಾನು ಬಾಯ್ತೆರೆದು ಮಾತನಾಡದೇ ಹೋದರೆ 'ನನ್ನೀ ಸೃಜಿಸಿದ' ರೂಪಕಗಳು ನನ್ನೊಳಗೇ ಸತ್ತು ಹೋಗಬಹುದೆಂಬ ಭಯ.
ಹೀಗಾಗಿ ನಾನೇ ಸೃಷ್ಟಿಸಿದ ಕಾವ್ಯ ಶರೀರವನ್ನು ನಾನೇ ಹರಿಯದೇ ವಿಧಿಯಿಲ್ಲ.
ಇದು ತಾನು ರಚಿಸಿದ ಕವಿತೆಗೆ ತಾನೇ ಅರ್ಥ ಹಿಂಜುವ ಮೂರ್ಖ ಕೆಲಸವೂ ಹೌದು ಎಂಬ ಅರಿವಿನಿಂದಲೇ ಇತ್ತೀಚಿಗೆ ಹುಟ್ಟಿದ ಹೊಸ ಕವಿತೆಯಿಂದ ಈ ಅಪರಾಧ ಕೃತ್ಯವನ್ನು ಮೊದಲು ಮಾಡುತ್ತಿದ್ದೇನೆ.


-1-

ಅಕಾರಣ ನಿಲ್ಲಿಸಿದ 
ನಗೆ
ಬದುಕಿನ
ಸಂಕಟಗಳಲ್ಲಿ ನಡೆದು ಹೋಗುವವರ
ಮನಗಳಲ್ಲಿ ಸತ್ಯಗಳೂ ಕಡಿಮೆ
ಸುಳ್ಳುಗಳೂ ಸತ್ತು ಹೋಗಿ
ಮಾಗಿಗೆ ಮಾಗಿ
ಹಳಸುವ ಹಲಸು ಸೋಗೆ...



 ಇಲ್ಲಿನ ಕಾವ್ಯ ವಸ್ತು ಕವನದ ಆರಂಭದಲ್ಲಿಯೇ ಅಕಾರಣದ ನಗೆಯಿಂದ ಆರಂಭವಾಗಿದೆ. ನಗುವಿಗೆ ನಾನಾ ಮುಖಗಳಿದ್ದರೂ ಅಕಾರಣ ನಗು ವಿಚಿತ್ರ ಅನುಭವವನ್ನು ಕಟ್ಟಿಕೊಡುವ ರೂಪಕ. ಕಾರಣವಿಲ್ಲದೇ ಮೂಡಿದ ನಗುವಿಗೆ ಕಾವ್ಯಪ್ರೇಮಿ ಯಾವುದಾದರೂ ಕಾರಣ ಸೇರಿಸಿಕೊಳ್ಳಲು, ಕಾರಣ ಕಟ್ಟಿಕೊಂಡು ಸುಖಿಸಲು ಅವಕಾಶವಿದೆ. ಬದುಕಿನ ಸಂಕಟಗಳಲ್ಲಿ ನಡೆದು ಹೋಗುವವರ ಮನಗಳಲ್ಲಿ ಇರುವ ಸತ್ಯಗಳು ಕಡಿಮೆ, ಸುಳ್ಳುಗಳೂ ಸತ್ತು ಹೋಗಿ ಎಂಬ ಗದ್ಯಗಂಧಿ ಸಾಲುಗಳಿಗೆ ತಾಳಮೇಳವಿಲ್ಲದ 'ಹಳಸುವ ಹಲಸು ಸೋಗೆ' ಸಾಲುಗಳು, ಎಂಬುದು ಗೆಳೆಯರ ದೂರು.
ಇದು ಕವನದ ಅಸಂಗತತೆ. ಹಲಸಿನ ಹಣ್ಣು ಎಷ್ಟೇ ಸಿಹಿ ಇದ್ದರೂ ಹಳಸಿದ ಹಲಸು ಯಾರಿಗೂ ರುಚಿಸದು. ನಿರ್ಭಾವುಕ ಸ್ಥಿತಿಯ ಮನುಷ್ಯ ಬದುಕುವ ಈ ರೀತಿಯ ಬದುಕು ಅನ್ಯರಿಗಷ್ಟೇ ಅಲ್ಲ ತನಗೇ ರುಚಿಸದು. ಹೀಗೆ ಅಕಾರಣದ ನಗೆ, ಬದುಕಿನ ನಡೆ ಒಟ್ಟಾಗಿ ಹಳಸುವುದು ಮೊದಲ ಪದ್ಯದ ತಿರುಳು. 


 -2-

ದಶಾವತಾರಿ ನಿನ್ನ 
ಮುಡಿ 
ಹೆರಳು
ಗೋಸುಂಬೆ
ಹೆರುವ ಖಾಲಿ ಬಟ್ಟೆ
ಊರ್ಮಿಳೆಯ ಎಡ ಗಾಲಿನ ಪ್ರಸವ
ಕೋಡ ಗಲ್ಲ ಕೂಸು.., 



 ಈ ಎರಡನೇ ಪದ್ಯದ ರೂಪಕಗಳ ಬಗ್ಗೆ ನನಗೇ ಅಚ್ಚರಿ ಇದೆ. ಈ ಸಾಲುಗಳು ಆರಂಭವಾಗುದು ಕೋಮಲವಾದ ಹೆರಳಿನ ಬಣ್ಣನೆಯಿಂದಾದರೂ, ಈ ಹೆರಳೋ ದಶಾವತಾರಿ. ಆಕೆಯ ಮುಖ ಕಾಣದ ಇಲ್ಲಿನ ಸಾಲು ಅವಳಿಗಾಗಿ ಹಲುಬುವಂತೆ ಕಂಡು ಒಮ್ಮೆಗೇ ಜಡೆಯನ್ನು ಗೋಸುಂಬೆ ಎನ್ನುವ ಮೂಲಕ ಆ ವೇಳೆಗೆ ಕಟ್ಟಿಕೊಳ್ಳುತ್ತಿರುವ ಕಲ್ಪನಾ ಲೋಕವನ್ನೇ ಒಡೆಯುತ್ತದೆ. ಮುಂದುವರೆದು ಈ ಜಡೆ ಹೆರುವುದು ಖಾಲಿ ಬಟ್ಟೆ. ಬಟ್ಟೆಯ ಪದ ಬಳಕೆಯಲ್ಲಿ ಅದು ಪಡಪೋಶಿ ಖಾಲಿ ಬಟ್ಟೆಯೂ ಆಗಬಬಹುದ, ಇಲ್ಲವೇ ಹಳಗನ್ನಡದ 'ದಾರಿ'ಯೂ ಆಗಬಹುದು.
ಕೊನೆಗೆ ಕಂಡಿದ್ದು ಊರ್ಮಿಳೆಯ ಎಡಗಾಲಿನ ಪ್ರಸವ. ಇಷ್ಟವಿಲ್ಲದೇ ಭೂಮಿ ಎತ್ತ ಕೂಸು ಅದು ಕೋಡ ಗಲ್ಲು!!
ಭೂಮಿಯಲ್ಲಿ ಬೆಟ್ಟ- ಗುಡ್ಡಗಳೇ ಎತ್ತರವಾದವು ಎಂದುಕೊಂಡರೂ ಮನುಷ್ಯ ಅದರ ಮೇಲೂ ಒಂದು ಕೋಡುಗಲ್ಲನ್ನು ನಿಲ್ಲಿಸಿ ಉನ್ನತಿಯನ್ನು ಪರಮೋನ್ನತಿಯಾಗಿಸುವ ಪ್ರಯತ್ನ ಮಾಡುತ್ತಾನೆ. ಇದು ಭೂಮಿ ಎತ್ತ ಕೂಸು. ಇದೇ ಉನ್ನತಿಯ ಅಂತಿಮ; ಶ್ರೇಷ್ಠ. ಆದರೆ ಅದು ಸಾಮಾನ್ಯವಾದ ಕೋಡುಗಲ್ಲೂ ಹೌದು?? ಆದರೂ ಅದು ಭೂ ತಾಯಿಯ ಕೂಸು. ಹೆಣ್ಣಿನ ಆಸೆಯ ನೋಟಗಳಿಂದ ಆರಂಭವಾಗುವ ಪದ್ಯ ಅಂತಿಮದಲ್ಲಿ ಭೂ ತಾಯಿಯ ಕಲ್ಪನೆಯೊಂದಿಗೆ ಬೆರೆಯುವುದು ವಿಚಿತ್ರ!?


-3-


ನಕ್ಕಿದ್ದೆ 

ಅಂದೆಂದೋ 
ಅವಳ ಕಾತರಿಸುವ ಹುಬ್ಬುಗಳಿಗೆ 
ಬಲಿಯಾಗಿದ್ದೆ
ನನ್ನ ಆಸೆಯ ಸಿಡಿ ಮಿಡಿ ಪಾಶಕ್ಕೆ 
ಕಾಲಿಗೆ ಎಡವಿ ಬಿದ್ದು
ಗೋರಿ 
ಅಲ್ಲಿ ನೋಡಿದರೆ 
ನನ್ನದೇ ಬಿಂಬ
ಕಳ್ಳ ಕರಾಳ
ನಿಂತಿದ್ದ
ಮರಣದ ಹಗ್ಗ ಹಿಡಿದು
ಜಾಣ ಮರೆವಲ್ಲಿ

 

ಇದರ ಹಿಂದಿನ ಪದ್ಯ ಜಡೆಯಿಂದ ಆರಂಭವಾದರೆ ಇಲ್ಲಿನ ವ್ಯಕ್ತಿ ಹೆಣ್ಣಿನ ಹುಬ್ಬುಗಳ ಸೆಳೆತಕ್ಕೆ ಬಿದ್ದವನು. ಅವನ ಪ್ರೇಯಸಿಯ ಹುಬ್ಬುಗಳಿಗೇ ಮನಸ್ಸುಕೊಡುವ ಭೂಪ ಈತ. ಆದರೆ ಅದೇ ಆಸೆ ಅವನ ಮೋಹಪಾಶವೂ ಹೌದು. ತನ್ನ ಕುತ್ತಿಗೆಗೆ ಬಿಗಿಯುವ ಹಗ್ಗ ಹಿಡಿದ ಕರಾಳ ರೂಪು ತನ್ನದೇ, ಅದಕ್ಕೇ ಆತ 'ಕಳ್ಳ'. ಬಾಗಿಲ ಮರೆಯಲ್ಲಿ ಅವಿತು ನಿಲ್ಲುವ ಪುಟ್ಟ ಪೋರನೊಬ್ಬ ಇಲ್ಲಿ ನೆನಪಾಗಬುಹುದು. ಅಥವಾ ಕರಾಳ ರೂಪದ ಯಮನೂ ಕೂಡಾ. ಆದರೂ ಆತ ಯಾವಾಗ ಮರಣಕ್ಕೆ ಕರೆಯುತ್ತಾನೋ ಗೊತ್ತಿಲ್ಲ. ಅವನಿಗೂ ಜಾಣ ಮರೆವು. ಆಟ ಸಾಗಲಿ ಎಂದು ಅವನೂ ನೋಡುತ್ತಾ ನಿಂತಿರಬೇಕು. ಏಕೆಂದರೆ ಅವನ ರೂಪವೇ ಇವನೂ ಹೌದು!


-4-


ನೀಗುವ ಹಮ್ಮು ಬಿಮ್ಮುಗಳ

ಕಳೆದ
ಸ್ವರ್ಗಾರೋಹಣದ ದೃಶ್ಯ
ಹಿಂಬಾಲಿಸುವ 
ಶ್ವಾನ
ಬುದ್ಧಿ
ನಾನು ಬದುಕಿದ್ದೆಷ್ಟು
ಸತ್ಯ ಅದಕ್ಕೆ 
ಒಪ್ಪಿಸಬೇಕಿದೆ
ಸಾಕ್ಷಿ;
ನಮ್ಮ ಎದೆಗಳ ರಕ್ತ 
ಬಸಿದು...

 
ಮನುಷ್ಯ ಎಷ್ಟೇ ಉನ್ನತಿ ಸಾಧಿಸಿದರೂ ಅಂತಿಮವಾಗಿ ಸಾವಿಗೆ ಶರಾಣಾಗುವ ಬಗೆ ಅಂತಿಮ ಪದ್ಯದ ವಸ್ತು. ಸ್ವರ್ಗಾರೋಹಣ ಮಹಾಭಾರತದ ಒಂದು ಸಂದರ್ಭ. ಎಲ್ಲರ ಮರಣಗಳನ್ನೂ ಕಣ್ಣಾರೆ ಕಂಡು ಸ್ವರ್ಗಕ್ಕೆ ನಡೆಯುವ ಧರ್ಮರಾಯನನ್ನು ನಾಯಿಯೊಂದು ಹಿಂಬಾಲಿಸುತ್ತದೆ. ಆ ನಾಯಿ ಆತ್ಮಸಾಕ್ಷಿಯ ಸಂಕೇತ. ಆದರೆ ಇಲ್ಲಿ ಹಿಂಬಾಲಿಸುತ್ತಿರುವುದು ಆ ಶ್ವಾನ ಬುದ್ಧಿ ಮಾತ್ರ. ಆ ಬುದ್ಧಿ ತನ್ನೊಳಗೇ ಗೃಹೀತವಾಗಿರುವಂಥದ್ದು.
ತನ್ನ ಬದುಕಿನ ಸಾಚಾತನವನ್ನು ತಾನು ಪರರಿಗೆ ಒಪ್ಪಿಸಬೇಕಾದ ಅಗತ್ಯ ಇಲ್ಲ. ಆದರೆ ಈ ಶ್ವಾನವಂತೂ ಸತ್ಯ ಕೇಳದೇ ಬೆನ್ನು ಬಿಡದು, ಅದಕ್ಕೆ ಸತ್ಯ ಒಪ್ಪಿಸದೇ ಇವನಿಗೆ ಮುಕ್ತಿಯೂ ಇಲ್ಲ. ಕೊನೆಗೆ ವ್ಯಕ್ತಿ ನೆಲೆಯಿಂದ ಸಮೂಹ ನೆಲೆಗಾದರೂ ಬಂದು ಮನುಷ್ಯ ತನ್ನ ಆತ್ಮೋನ್ನತಿಯ ಪಾರಮಾರ್ಥವಾದ ಮುಕ್ತಿಗೆ ಶರಣಾಗಲೇಬೇಕು. ವ್ಯಕ್ತಿ ನೆಲೆಯಿಂದ ಸಮೂಹ ನೆಲೆಗೆ ಇಡೀ ಕವಿತೆ ಬದಲಾಗುವುದು ಕವಿತೆಯ ಶಕ್ತಿ (ನನ್ನ ಬೆನ್ನು ನಾನೇ ತಟ್ಟಿಕೊಳ್ಳತ್ತಾ...) ಕವಿತೆಗೆ ಶೀರ್ಷಿಕೆ ಇಲ್ಲದ್ದು ಬಹುಶಃ ಕವಿತೆಯ ಮಿತಿ..

ಇಷ್ಟೆಲ್ಲಾ ಕವಿತೆಯನ್ನು ಹಿಂಜಿಯಾದ ಮೇಲೂ ಉಳಿಯುವ ಅನುಮಾನಗಳು ಇವು--

ನಾನು ಕವಿಯಾಗಿ ಬರೆದಾದ ಮೇಲೆ ಕವಿತೆಯನ್ನು ಓದುಗನಾಗಿ ಕಂಡದ್ದು ಈ ಎಲ್ಲ ಅಭಿಪ್ರಾಯ. ನಾನೂ ಒಬ್ಬ ಓದುಗನ ನೆಲೆಯಿಂದ ಕಾವ್ಯವನ್ನು ಪ್ರವೇಶಿಸಿರುವುದರಿಂದ ಅದು ನನಗೆ ದರ್ಶಿಸಿರುವ ಸತ್ಯ ಇಷ್ಟು. ಆದರೆ ಕವಿತೆಯ ಸತ್ಯ ಇಷ್ಟೇ ಅಲ್ಲ ಎಂಬ ಅರಿವು ನಾನೊಬ್ಬ ಕವಿಯಾಗಿಯೂ, ಕಾವ್ಯದ ಓದುಗನಾಗಿಯೂ ಇರಬೇಕಾದ್ದು ಅಗತ್ಯ.
 ಕಾವ್ಯ ಏಕ ಮುಖವಾಗಿ ಹರಿಯುವಂಥದ್ದಲ್ಲ. ಮೀನು ಪ್ರವಾಹದ ವಿರುದ್ಧ ಈಜುವುದಷ್ಟೇ ಅಲ್ಲ ಜಲಪಾತಗಳನ್ನೂ ಏರುತ್ತದೆ ಎಂಬ ಮಾತಿದೆ. ಕಾವ್ಯವೂ ಹಾಗೇ ಅದು ಕೆಳಕ್ಕೆ ಬೀಳುವ ವೇಗದಲ್ಲಿಯೇ ವ್ಯೋಮಕ್ಕೂ ಜಿಗಿಯಬಲ್ಲದು.
ಕಂಡ ಕಂಡವರಿಗೆ ಮೋಡಗಳು ಅವರವರ ಕಲ್ಪನೆಗಳನ್ನು ವಿಸ್ತರಿಸುವಂತೆ ಕಾವ್ಯವೂ ಕೂಡಾ. ನೋಟವನ್ನು ವಿಸ್ತರಿಸಿಕೊಳ್ಳುವವರಿಗೆ ಎಲ್ಲವೂ ಕಂಡೀತು. ಸಾಮಾನ್ಯ ನೋಟಕ್ಕೆ ಮೋಡವೂ ಮೋಡ, ಕಾವ್ಯವೂ ಕಾವ್ಯ ಅಷ್ಟೇ...

No comments:

Post a Comment