Monday, June 10, 2013

ಲಿಡಾ ಮತ್ತು ತತ್ತಿ
--------------------------------------
ಒಡೆದ ತತ್ತಿಗಳ ಮುಖ ಮಣ್ಣ ಸವರಿ
ಒತ್ತೊತ್ತಿ ಮಗ್ಗುಲ ಸಂದು
ನೋವಿನಲ್ಲಿ ಸಣ್ಣಗೆ
ನರಳಿದ ಆಕಾಂಕ್ಷಿ,
ಆಕಾಶದಿಂದುದ್ದುದ್ದ ಬಿದ್ದ
ಶುದ್ಧ ವೀರ್ಯ ಮುತ್ತು
ಕತ್ತುಕೊಟ್ಟ ಹಂಸ ಬಿಗಿದಿದ್ದ ನೆತ್ತಿ, ನೆಲವ.


ಕಂಕುಳೊಳಗೊಂದು
ಕೈಯ್ಯಲ್ಲಿ ಕೊಸರುವ ಮರಿ
ಮಾಂಸದ ಮುದ್ದೆ
ಇರುವೆ ಮುತ್ತುವ ಭೀತಿಯಲ್ಲಿ
ಪೊರೆ ಕಳಚಿ ತೊಗಲ ಹೊಂದುವ ಹೆಣ್ಣು- ಗಂಡು
'ಅಮ್ಮಾ' ಎಂದಾಗ ಜಿನುಗುವ
ಮೊಲೆ ಹಾಲು.


ಬಳಲಿದ ಬಾಲೆ
ಹಾರಾಡಿ ಬಿಡು ಬೀಸಲ್ಲಿ ಸೆಳೆದ ಮತ್ತಿಗೆ
ಮೆತ್ತಗೆ ಮೈಯ್ಯ ಕೊಟ್ಟು
ಆಲಂಗಿಸಿ ಹಸಿ ಒದ್ದೆಯಲಿ
ಮೈ ಬೆವರೇರಿ ಇಳಿದ ನಾಜೂಕು
ಹಕ್ಕಿಯಾದರೇನು
ಹಂಗಿಲ್ಲ ಸುಖಕ್ಕೆ
ನಾಚಿ ನುಣುಪಿನ ಎದೆ ತೊಡೆಗಳ
ಹಾಸಿ
ಚಾಚಿ ನಲಿದೋಳ ತುಂಬು ಚುಂಬನಕ್ಕೆ
ಹರಕೆಯಾದವಳ
ಹದಕ್ಕೆ ಬಿದ್ದ ತತ್ತಿ ಸಂತತಿ.


ನೆಲ ನೆಚ್ಚಿ ಬೆತ್ತಲಾದವಳ ಬೆದೆಗೆ
ಹಂಸನ ಉನ್ಮತ್ತ ಉತ್ತುಂಗ
ಒಂದು ಎರಡು ನಾಲ್ಕು
ಕನ್ಯೆ ತಾಯಿಯಾದ ಭಯದ ಕನಸಲ್ಲಿ
ಉಮ್ಮಳಿಸಿ ವರ್ತಮಾನ
ಹಾಡುತ್ತಿತ್ತು ಹಂಸಗೀತೆ...

No comments:

Post a Comment