Tuesday, May 24, 2011

ಅನುಭವಗಳನ್ನು ಗಾಳಿಗೆ ತೂರುವ ಟೀಕುಟಾಕು ಕನಸುಗಳು...
-1-
ನದಿಯೇನೂ ಸುಮ್ಮನೆ ಹುಟ್ಟುವುದಿಲ್ಲ
ಸುಮ್ಮನೆ ಹರಿಯುವುದಿಲ್ಲ,
ಧುಮುಕಿ, ಧುಮ್ಮಿಕ್ಕಿ, ಕಾಡು ಮೇಡು
ಹತ್ತಿ ಇಳಿದು
ಬಸಿದು, ಆವಿಗೊಂಡು
ಉಳಿದಿದ್ದೊಂದಿಷ್ಟು
ಸಾಗರದ ಪಾಲಿಗೆ.
-2-
ಚುಕ್ಕಿ ಚುಕ್ಕಿಗಳ ಕೂಡಿಸಿ
ರಾಶಿ ರಾಶಿ ಗ್ರಹಗತಿ ಜೋಡಿಸುವ
ಹರಾಕು- ತಿರುಮ , ಸಂಗಮ, ಕೂಡಲು
ಜೋಡಿ,
ಹಾಸಿಗೆ ಹಾರಾಕಿ,
ತಡಿಕೆ ಮಗ್ಗಲು ಮಾಡಿ
ಮಿಂದು ಬರುವ
ಬುಡ ಬುಡಕೆ
ಅದೆಲ್ಲಾ ಸತ್ಯ-ಸುಳ್ಳು...

-3-
ಒಂದು ಕಥೆ-
ಅಲ್ಲಿ ಬಂದ ಹಾಳೂರಿಗೆ
ಒಬ್ಬ ರಾಜಕುಮಾರ
ಅವನದು
ಬೇವಾರ್ಸಿ ರೂಪು,
ತುದಿ ಮೊದಲು ತಿಳಿದಿಲ್ಲ
ತಪರಾಕಿ,
ನೆಲೆ ಕಟ್ಟಿ, ಹೊಲ ಮಾಡಿ
ಬೆಳೆದು ತಿಂದು
ಆಮೇಲವನು
ಬೇಸಾಯಗಾರ.
ಒಂದು ದಿನ-
ಅದೇ ಉಳುಮೆ, ಅದೇ ಬೆಳೆ
ಅದೇ ಊಟ,
ರಾಜಕುಮಾರನಿಗೆ ಬೇಜಾರಾಯ್ತು,
ಆದರಾಗಲೇ ಆತ
ಬೇಸಾಯಗಾರನಾಗಿದ್ದ.
ಒಂದು ಕ್ಷಣ-
ಅನಿಸಿತ್ತು ಬೇಸಾಯಗಾರನಿಗೆ
ಜೋಡಿ ಮೊಲೆ, ಕೂಡು ಯೋನಿ,
ಅದೇ ಸಂ-ಭೋಗ, ಸಂಸಾರ....,
ನದಿಯಾಚೆಗೇನಿದೆ
ಸುಡುಗಾಡು?????
ಲೋಕ????????

ಉಪಸಂಹಾರ-
ಮೂಗುದಾರ ಕುಯ್ದು ಹೊಡೆದ ದನಗಳ,
ನೇಗಿಲು ನೊಗ ಗೆದ್ದಲಿನಾಸ್ತಿ,
ಹೇಳದೇ ಕೇಳದೇ
ರಾತ್ರೋ ರಾತ್ರಿ ನದಿ ದಾಟಿದ ರಾಜಕುಮಾರ
-ವೀರ-
ಅವನ ಬುತ್ತಿ ತುಂಬಾ
ಬರೇ ಕನಸುಗಳು.
-4-
ನದಿ
ಈಗಲೂ ಸುಮ್ಮನೇ ಹರಿದಿಲ್ಲ,
ಕನಸುಗಳು ಕಡೆಯುತ್ತಿವೆ,
ಕಾಡುಗಲ್ಲ ತಿಕ್ಕಿ ಹೊರಳುವ ಪ್ರತಿ ಹನಿ
ನೀರೂ........
ಹೊರಲಾಗದ ಭಾರ
ನದಿ ಮೇಲೆ
ಸಾಕು ಸಾಕೆಂದರೂ
ನಿಂತಿಲ್ಲ
ಪಯಣ!!!!
(24-05-2011)

No comments:

Post a Comment