ವೀರಪ್ಪನ್ ಹೆಂಡತಿಯಾಗಿದ್ದೇ ನನ್ನ ಅಪರಾಧ...
ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಮೇಲಿನ ಪ್ರಮುಖ ಆರೋಪವಾಗಿದ್ದ ಪಾಲಾರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ತೀರ್ಪು ಹೊರ ಬಿದ್ದಿದೆ. ಮುತ್ತುಲಕ್ಷ್ಮಿಯೂ ಸೇರಿದಂತೆ 7ಜನರನ್ನು ನ್ಯಾಯಾಲಯ ಸಮರ್ಪಕ ಸಾಕ್ಷಾಧಾರಗಳ ಕೊರತೆಯ ಕಾರಣ ಆರೋಪ ಮುಕ್ತರನ್ನಾಗಿಸಿದೆ. ಈ ವರೆಗೆ ಮುತ್ತುಲಕ್ಷ್ಮಿ ಮೇಲಿನ ನಾಲ್ಕು ಪ್ರಕರಣಗಳು ಖುಲಾಸೆಯಾಗಿದ್ದು, ಬಾಕಿ ಇನ್ನೊಂದು ಪ್ರಕರಣದ ವಿಚಾರಣೆ ಇಂದಿನಿಂದಲೇ ಆರಂಭಗೊಂಡಿದೆ. ಮುತ್ತುಲಕ್ಷ್ಮಿ ಇಂದು ಸ್ವಲ್ಪನಿರಾಳವಾಗಿರುವಂತೆ ತೋರುತ್ತಿತ್ತು. ವಿನಾಕಾರಣ ತನ್ನ ಮೇಲಾದ ದೌರ್ಜನ್ಯ, ಅಪಮಾನಗಳನ್ನು ಇಲ್ಲಿಯ ವರೆಗೆ ತಡೆದುಕೊಂಡಿರುವ ಮುತ್ತುಲಕ್ಷ್ಮಿಗೆ ಇಂದಿನ ತೀರ್ಪುಕೂಡಾ ಹೆಚ್ಚು ಖುಷಿಯನ್ನೇನೂ ತಂದಿಲ್ಲ. ತನ್ನದ್ದಲ್ಲದ ತಪ್ಪಿಗಾಗಿ ಮುತ್ತುಲಕ್ಷ್ಮಿ ಪದೇ ಪದೇ ಬಂಧನ, ನ್ಯಾಯಾಲಯಕ್ಕೆ ಅಲೆದಾಟ, ಪೊಲೀಸರ ಹಿಂಸೆಗಳನ್ನು ಸಹಿಸಿಕೊಳ್ಳಬೇಕಾಯಿತು. ಇಷ್ಟೆಲ್ಲದರ ನಡುವೆ ಇಂದು ಮುತ್ತುಲಕ್ಷ್ಮಿ ಹೇಳಿದ್ದು-‘ ನಾನು ಯಾವುದೇ ತಪ್ಪು ಮಾಡಿಲ್ಲ, ವೀರಪ್ಪನ್ ಹೆಂಡತಿಯೆಂಬ ಒಂದೇ ಕಾರಣ – ನನ್ನ ಮೇಲಿನ ಆರೋಪ ಪಟ್ಟಿಗಳು, ಹೀಗಾಗಿ ನಾನು ವೀರಪ್ಪನ್ ಹೆಂಡತಿಯಾದದ್ದೇ ನನ್ನ ಅಪರಾಧ’. ಈ ಮಾತುಗಳನ್ನು ಹೇಳುವಾಗ ಮುತ್ತುಲಕ್ಷ್ಮಿ ಯಾವ ಉದ್ವೇಗಕ್ಕೂ ಒಳಗಾಗಲಿಲ್ಲ. ಬದಲಾಗಿ ‘ಈ ಜೀವನ’ ಆಕೆಗೆ ಅಭ್ಯಾಸವಾಗಿಹೋಗಿದೆ. ವೀರಪ್ಪನ್ ಸಾವಿನ ನಂತರವಂತೂ ಆಕೆ ಇನ್ನಿಲ್ಲದ ಹಿಂಸೆ ಅನುಭವಿಸಿರುವುದು ಸುಳ್ಳಲ್ಲ.
ಸೂಕ್ಷ್ಮವಾಗಿಯೂ, ಗಂಭಿರವಾಗಿಯೂ ನೋಡಿದರೆ ಮುತ್ತುಲಕ್ಷ್ಮಿ ಆಂತರ್ಯದಲ್ಲಿನ ನೋವು ಅರ್ಥವಾಗುತ್ತದೆ. ಹೌದು, ವೀರಪ್ಪನ್ ಹೆಂಡತಿಯಾಗಿದ್ದೇ ಮುತ್ತುಲಕ್ಷ್ಮಿಯ ಅಪರಾಧ!!!
1990 – ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ನೆರುಪ್ಪೋರಿನ ಮುತ್ತುಲಕ್ಷ್ಮಿ ಆಗ ಕಾಡುಗಳ್ಳನಾಗಿ ‘ತುಂಬಾ’ ಹೆಸರು ಮಾಡಿದ್ದ ವೀರಪ್ಪನ್ ನನ್ನು ವರಿಸಿದ ವರ್ಷ. ಅಂದಿಗೆ ವೀರಪ್ಪನ್ ಬಹು ಚಾಲ್ತಿಯಲ್ಲಿದ್ದ ಹೆಸರು. ವೀರಪ್ಪನ್ ಬಡವರ ಬಂಧು, ಕಾಡಿನಜನರ ಪರ ಹೋರಾಟಗಾರ, ಉಳ್ಳವರಿಂದ ಕಸಿದು ಇರದವರಿಗೆ ಕೊಡುವ ‘ಕರ್ನಾಟಕದ ರಾಬಿನ್ ಹುಡ್’ ಎಂಬ ಧನಾತ್ಮಕ ಮಾತುಗಳು ಒಂದೆಡೆಯಾದರೆ ; ವೀರಪ್ಪನ್ ಕಾಡುಗಳ್ಳ , ಆನೆದಂತಚೋರ, ನರಹಂತಕ ಹೀಗೆ ಋಣಾತ್ಮಕ ಮಾತುಗಳೂ ಆಕಾಲದಲ್ಲಿ ಚಾಲ್ತಿಯಲ್ಲಿದ್ದವು. ಆದರೆ ಮುತ್ತುಲಕ್ಷ್ಮಿ ಹೇಳಿಕೊಳ್ಳುವುದು ವೀರಪ್ಪನ್ ನ ಉಪಕಾರಿಗುಣ ಹಾಗೂ ಅವನ ನಾಯಕಗುಣಗಳಿಂದ ತಾನು ಆತನನ್ನು ಒಪ್ಪಿಕೊಂಡೆ ಎಂದು. ಇಲ್ಲಿ ವೀರಪ್ಪನ್ ಬಗೆಗಿನ ಪರ-ವಿರೋಧ ಮಾತುಗಳಿಗಿಂತಾ ವಿಶಾಲಸಾಮನ್ಯ ಗ್ರಹಿಕೆಯಲ್ಲಿ ನರಹಂತಕನೇ ಆಗಿದ್ದ ವೀರಪ್ಪನ್ ನನ್ನು ಮದುವೆಯಾಗಿ ಮುತ್ತುಲಕ್ಷ್ಮಿ ಅನುಭವಿಸಿದ ತಲ್ಲಣಗಳು ಪ್ರಮುಖವಾಗುತ್ತವೆ.
ವೀರಪ್ಪನ್ ಕಾಡಿನರಾಜನಾಗಿ ಮೆರೆಯುತ್ತಿದ್ದ ಕಾಲಘಟ್ಟದಲ್ಲಿಯೂ ಮುತ್ತುಲಕ್ಷ್ಮಿ ‘ಕಾಡಿನರಾಣಿ’ ಯಾಗಿ ಮೆರೆದವಳೇನಲ್ಲ. ಆಕೆಯದು ಸದಾ ಗೊಂದಲದ ಜೀವನ. ಪದೇ ಪದೇ ನಡೆಯುತ್ತಿದ್ದ ಪೊಲೀಸ್ ಧಾಳಿಗಳು, ಗಂಡನೆಲ್ಲೋ, ಮನೆ ಎಲ್ಲೋ, ಮಕ್ಕಳೆಲ್ಲೋ.... ಇಲ್ಲಿಯ ವರೆಗೂ ಮುತ್ತುಲಕ್ಷ್ಮಿ ಹೀಗೇ ಬದುಕಿದವಳು. ಮುತ್ತುಲಕ್ಷ್ಮಿ ಅನುಕಂಪಕ್ಕೆ ಯೋಗ್ಯಳಾಗುವುದು ಇದೇ ಕಾರಣಕ್ಕೆ. ಆದರೆ ಆಕೆಗೆ ಬೇಕಾದ್ದು ನಿಜವಾಗಿಯೂ ಕೇವಲ ಅನುಕಂಪವಲ್ಲ!!!
ವೀರಪ್ಪನ್ ಇದ್ದಾಗೂ, ವೀರಪ್ಪನ್ ನಂತರವೂ ಮುತ್ತುಲಕ್ಷ್ಮಿ ಪೊಲೀಸರ ದೌರ್ಜನ್ಯಕ್ಕೆ ನಿರಂತರವಾಗಿ ಒಳಗಾಗಿದ್ದಾಳೆ. ಮಾನವಹಕ್ಕುಗಳ ಪುಟಗಳಲ್ಲಿ ಒಂದೂ ಈಕೆಯ ಪಾಲಿಗೆ ಈವರೆಗೆ ಅನ್ವಯವಾಗೇ ಇಲ್ಲ. ‘ಕಳ್ಳನ ಹೆಂಡಿರು ಮುಂಡೆ’ ಎಂಬ ಗಾದೆ ಇದೆ. ಆದರೆ ಮುತ್ತುಲಕ್ಷ್ಮಿ ಕೇವಲ ಮುಂಡೆ ಜೀವನ ಮಾತ್ರವಲ್ಲ, ವೀರಪ್ಪನ್ ಬಿಟ್ಟುಹೋದ ‘ಸಾಲ’ಗಳ ‘ಸಾಲಗಾರ’ಳಾಗಿಯೂ ಬದುಕಬೇಕಾಯಿತು. ಅದರ ಪರಿಣಾಮ – ವೀರಪ್ಪನ್ ನ ಆರೋಪಗಳು ಈಕೆಗೆ ವರ್ಗಾವಣೆಗೊಂಡಿದ್ದು.
ಮುತ್ತುಲಕ್ಷ್ಮಿ ಎಷ್ಟು ಪಾಲು ಒಳ್ಳೆವಳು, ಕೆಟ್ಟವಳು ಎನ್ನುವುದಕ್ಕಿಂತಾ ಇಂದು ಆಕೆಯನ್ನು ಕಾಣಬೇಕಾದ್ದು ಒಬ್ಬ ಮನುಷ್ಯಳಾಗಿ. ಬದುಕಿನ ಬಹುಪಾಲು ಜೀವನವನ್ನು ಜೈಲಿನಲ್ಲೇ ಕಳೆದಿರುವ ಮುತ್ತುಲಕ್ಷ್ಮಿಯ ಮುಂದಿನ ಆಸೆ – ರಾಜಕೀಯ.
ಆಕೆಯ ಮುಂದಿನ ಈ ಜೀವನಕ್ಕೆ ಶುಭವಾಗಲಿ........
No comments:
Post a Comment