Friday, March 18, 2011

ಮಾಧ್ಯಮದ ಮೇಲೆ ನಿರಂತರ ಹಲ್ಲೆ ; ಏರದ ಧನಿ!
ಇಂದು ಒಂದೇ ದಿನ ವಿವಿದೆಡೆ ಮಾಧ್ಯಮದವರ ಮೇಲೆ ಹಲ್ಲೆ ನಡೆದಿದೆ. ರಾಜಧಾನಿ ಬೆಂಗಳೂರಿನಲ್ಲೇ ಒಟ್ಟಾಗಿದ್ದ ಮಾಧ್ಯಮ ಮಿತ್ರರ ಮೇಲೆ ಹಲ್ಲೆ ನಡೆದರೆ, ಬೀದರ್ ನ ಪತ್ರಕರ್ತ ಗೆಳೆಯ ಸಂಜಯ್ ಚಿಕ್ಕಮಠ್ ಹಾಗೂ ಅವರ ಕ್ಯಾಮರಾಮನ್ ಮೇಲೆ ಹಲ್ಲೆ ನಡೆದಿದೆ. ಹೀಗಾಗಿ ಮಾಧ್ಯಮದ ಮೇಲಿನ ಹಲ್ಲೆ ವಿಚಾರದಲ್ಲಿ ಉಳ್ಳವರು ಹೆದರಲಾರರು ಎಂಬುದು ಮತ್ತೆ  ಸಾಬೀತಾಗಿದೆ. ಬೆಂಗಳೂರಿನ ಸ್ಕೈಲೈನ್ ಕನ್ಟ್ರಕ್ಷನ್ ನ ಕೆಲವರು ಕಂಪನಿ ವಿವಾದ ವರದಿಮಾಡದಂತೆ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿದರೆ, ಬೀದರ್ ನಲ್ಲಿ ಲೋಕಾಯುಕ್ತದಾಳಿಯನ್ನು ವರದಿಮಾಡಿದ್ದ ಕಾರಣಕ್ಕೆ ಹಲ್ಲೆ ನಡೆದಿದೆ. ಹಲ್ಲೆ ನಡೆದ ಸಂದರ್ಭ ಅದೃಷ್ಟವಶಾತ್ ಯಾರಿಗೂ ತೀವ್ರತರ ಗಾಯಗಳಾಗಿಲ್ಲ. ಆದರೆ ಅದಕ್ಕಾಗೇ ಈ ಪ್ರಕರಣವನ್ನು ಹಗುರವಾಗಿ ಪರಿಗಣಿಸಲಾಗದು.
ನಾನು ಸಣ್ಣವನಿದ್ದಾಗ ತೀವ್ರ ಕುತೂಹಲ ಕೆರಳಿಸಿದ್ದ ಒಂದು ಘಟನೆ ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಪತ್ರಕರ್ತನೊಬ್ಬನ ಕೊಲೆ. ಪತ್ರಕರ್ತ ಎಂದರೆ ಯಾರು ಎಂದೇ ಗೊತ್ತಿಲ್ಲದ ವಯಸ್ಸಿನಲ್ಲಿ  ಪತ್ರಕರ್ತನ ಕೊಲೆ ನನ್ನನ್ನು ತೀವ್ರವಾಗಿ ಕಾಡಿತ್ತು. ಎಂ.ಎಲ್.ಎ ವಿರುದ್ಧ ಬರೆದದ್ದೇ ಅವನ ಸಾವಿಗೆ ಕಾರಣ ಎಂದು ಆಗ ಆ ಭಾಗದಲ್ಲಿ ಜನ ಮಾತನಾಡಿಕೊಳ್ಳುತ್ತಿದ್ದರು. ಹೀಗಾಗಿ ಏನಾದರೂ ಪತ್ರಕರ್ತ ಮಾತ್ರ ಆಗಬಾರದು ಎಂದು ಆಗಲೇ ನಿಶ್ಚಯಿಸಿದ್ದೆ!!!???
ಇನ್ನೊಂದು ಹಳೆಯ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯದ್ದು. ಇಲ್ಲೂ ಬಂಡೀಪುರ ರಾಷ್ಟ್ರೀಯ ಉದ್ಯಾನದಿಂದ ಮರಸಾಗಿಸುವ ಕಾಡುಗಳ್ಳತನ ದ ಬಗ್ಗೆ ವರದಿಮಾಡಲು ಬಂದಿದ್ದ ಬೆಂಗಳೂರು ಪತ್ರಕರ್ತನೊಬ್ಬನ ಕೊಲೆಯಾಗಿತ್ತಂತೆ. ಈ ಕಾಡುಗಳ್ಳತನ ಹಾಗೂ ಕೊಲೆಯ ಹಿಂದೆ ಸ್ಥಳೀಯ ಜನಪ್ರಿಯ, ಜನಪ್ರತಿನಿಧಿಯೊಬ್ಬರ ನೇರ ಕೈವಾಡ ಇದ್ದದ್ದು ನಿಜ ಎಂದು ಇಲ್ಲಿನ ಜನ ಇಂದಿಗೂ ಗುಟ್ಟಾಗಿ ಮಾತನಾಡಿಕೊಳ್ಳುತ್ತಾರೆ. ಆದರೆ ಆ ಗುಟ್ಟು ಗುಟ್ಟಾಗಿ ಉಳಿದಿಲ್ಲ ಎಂಬುದೇ ಇಂದಿಗೂ ಗುಟ್ಟಾಗಿ ಉಳಿದಿರುವ ರೋಚಕ ಸಂಗತಿ.

ಈ ಎರಡೂ ಘಟನೆಗಳನ್ನು ಗಮನಿಸಿದರೆ ಹಣಬಲ ಹಾಗೂ ಅಧಿಕಾರಬಲಗಳು ಹೇಗೆ ಮಾಧ್ಯಮದ ಮೇಲೆ , ಅದರಲ್ಲೂ  ಕೊಲೆಯಂಥಾ ಘೋರಕೃತ್ಯಗಳನ್ನೂ ಎಸಗಿ ಬಚಾವಾಗಲು ಹೇಗೆ ಸಹಕಾರಿಯಾದುವು ಎನ್ನುವುದು. ದುರಂತ ಎಂದರೆ  ಈ ಕೊಲೆ, ದಂಧೆಗಳ ನೇರ ವ್ಯಕ್ತಿಗಳು ಈ ನಾಡಿನ ಮುಖ್ಯರಸ್ತೆಗಳಲ್ಲಿ ನಮಗೆ ಮುಖಾಮುಖಿಯಾಗುತ್ತಲೇ ಇರುತ್ತವೆ!!!
ಗಮನಿಸಬೇಕಾದ ಅಂಶ ಈ ಬಲಗಳು ಮಾಧ್ಯಮದ ಮೇಲಿನ ಹಲ್ಲೆಗಳನ್ನು  ಆ ಕಾಲಕ್ಕೆ ಗಂಭೀರವೇ ಅಲ್ಲ ಎನ್ನುವಂತೆ ಎಲ್ಲವನ್ನೂ ಹೇಗೆ ಖುಲಾಸ್ ಮಾಡಿವೆ ಎಂಬುದು. ಏನು ಬೇಕಾದರೂ ಮಾಡಿ ಬಚಾವ್ ಆಗಬಹುದೆಂಬುದಕ್ಕೆ ಇವರು (ಬಹುಶಃ ಹೆಮ್ಮೆಯಿಂದ..) ಕೊಟ್ಟುಕೊಳ್ಳುವ ಹಸಿಹಸಿ ಉದಾಹರಣೆಗಳಿವು. ನಮ್ಮಲ್ಲಂತೂ ಹತ್ತು ಕೊಲೆ ಮಾಡಿ ಬಾರಯ್ಯ, ಒಂದೇ ದಿನದಲ್ಲೇ ಹೊರಕ್ಕ್ ಕರ್ಕೊಂಡು ಬರ್ತೀನಿ –ಎನ್ನುವ ವಕೀಲರಿಗೇನೂ ಕಡಿಮೆ ಇಲ್ಲ. ಹೀಗಿರುವಾಗ ರಾಜಕೀಯ ಮತ್ತು ಹಣ ಬಲವಿರುವ ಕುಳಗಳಿಗೆ ಸತ್ಯ ಮುಚ್ಚಿ ಹಾಕಲು ಪತ್ರಕರ್ತರ ಕೊಲೆಯಾದರೇನು, ಮಾಧ್ಯಮದ ಮೇಲಿನ ಹಲ್ಲೆಯಾದರೇನು...?????????
ಇದರ ವಿರುದ್ಧದ ಗಟ್ಟಿಧನಿಗಲು ಏಳುತ್ತಿಲ್ಲ. ವರದಿಗಾರರ ಕೂಟಗಳು, ಪತ್ರಕರ್ತರ ಸಂಘಗಳು ಮಾಧ್ಯಮದ ಮೇಲೆ ಹಲ್ಲೆಯಾದಾಗ ಗಟ್ಟಿಯಾಗಿ ಮಾತಾಡುತ್ತಿಲ್ಲ. ಹೀಗಾಗಿ ಇವೂ ತಮ್ಮ ದನಿಕಳೆದುಕೊಂಡಿವೆ ಎಂದೇ ಹೇಳಬಹುದು.

ಇಂದು ಹೆಚ್ಚುತ್ತಿರುವ ಮಾಧ್ಯಮಗಳ ಪೈಪೋಟಿಯಲ್ಲಿ  ಸಂಸ್ಥೆಗಳು ಪರಸ್ಪರ ಗೌರವದಿಂದ ನಡೆದುಕೊಳ್ಳುವ ಸ್ವಭಾವವೇ ಮರೆಯಾಗಿದೆ. ಸಂಸ್ಥೆಯ ಮೇಲೆ ಅಥವಾ ಆ ಸಂಸ್ಥೆಗೆ ಸೇರಿದ ಪತ್ರಕರ್ತನ ಮೇಲೆ ಧಾಳಿಯಾದರೆ , ಸಂಸ್ಥೆಯ ಪತ್ರಕರ್ತ??ರು ಒಳಗೊಳಗೇ ಖುಷಿಪಡುವ ಸನ್ನಿವೇಷ ಇಂದು ನಿರ್ಮಾಣವಾಗಿದೆ. ಒಳಗೊಳಗೇ ಪರಸ್ಪರ ಕಾಲೆಳೆಯುವ ಪ್ರವೃತ್ತಿ ಹೆಚ್ಚುತ್ತಿದೆ. ನಮ್ಮ ಇಂದಿನ ಪತ್ರಿಕೋದ್ಯಮ ಬಹುಪಾಲು ಪೀತಪತ್ರಿಕೋದ್ಯಮ ದ ಹಾದಿ ತುಳಿದಿದೆ. ಸುದ್ದಿವಾಹಿನಿಗಳಂತೂ ವಿಪರೀತಕ್ಕೆ ಹೋಗುತ್ತಿವೆ. ಸ್ಪರ್ಧೆ ಕುತ್ತಿಗೆಗೆ ಬರುತ್ತಿದೆ. ಅನಾರೋಗ್ಯಕರ ಪೈಪೋಟಿ ಅತಿಯಾಗುತ್ತಿದೆ. ಇವೆಲ್ಲವನ್ನೂ ಸಹಿಸಿಕೊಳ್ಳುವ ಇಂದಿನ ಅರೆಬರೆ ಪ್ರಾಮಾಣಿಕ ಪತ್ರಕರ್ತರಮೇಲೇ ಇಂತಹ  ಹಲ್ಲೆಗಳಾಗುವುದೆಂಬುದನ್ನು ಗಮನಿಸಬೇಕು. ರಾಜಕೀಯ ಪಕ್ಷಗಳಲ್ಲಿರುವ, ಬಂಡವಾಳಗಾರ ರಾಜಕಾರಣಿಗಳೇ ಇಂದಿನ ಬಹುತೇಕ ಸುದ್ದಿವಾಹಿನಿಗಳ ಮಾಲೀಕರಾಗಿರುವುದು ಇಂದಿನ ವೈರುಧ್ಯ ಎನಿಸುತ್ತಿದೆ. ತಮ್ಮ ಸಂಸ್ಥೆಯ ಕೂಲಿಕಾರ್ಮಿಕರಾದ ಪತ್ರಕರ್ತರ ಬಗ್ಗೆ ಇವರಲ್ಲಿ ಅದೆಷ್ಟು ಕಾಳಜಿ ಇದೆ ಎಂಬುದು ಇಂದಿನ ದಿನಗಳಲ್ಲಿ ಎದ್ದು ಕಾಣುತ್ತಲೇ ಇದೆ. ಹೀಗಿರುವಾಗ ವೈಯಕ್ತಿಕ ಕಾಳಜಿ ಇಂದ ಪತ್ರಕರ್ತ ಇಂದು ಸತ್ಯಶೋಧಕ್ಕೆ ತೊಡಗಲು ಸಾಧ್ಯವೇ ಎಂಬುದು ದೊಡ್ಡ ಪ್ರಶ್ನೆ..
ಎತ್ತ ಸಾಗುತ್ತಿದೆ ಪತ್ರಿಕೋದ್ಯಮ???, ಎಲ್ಲಿಗೆ ನಡೆದಿದೆ ಸಮಾಜ...??????

No comments:

Post a Comment